

ಲಿಂಗಸುಗೂರು: ವಾರದ ಸಂತೆ ಸ್ಥಳವನ್ನು ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಭವನ ದುರಸ್ತಿಗೊಳಿಸಲು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಮುಖಂಡರು ಎಸಿ ಕಚೇರಿ ಎಫ್ಡಿಸಿ ಆದಪ್ಪಗೆ ಗುರುವಾರ ಮನವಿ ಸಲ್ಲಿಸಿದರು.
ಪುರಸಭೆಗೆ ವಾರದ ಸಂತೆಯಿಂದ ಲಕ್ಷಾಂತರ ರೂ. ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಪುರಸಭೆಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಮಳೆ ಬಂದರೆ ಸಾಕು ಸಂತೆ ಪ್ರದೇಶ ಕೆಸರು ಗದ್ದೆಯಂತಾಗುತ್ತದೆ. ಕೆಸರಿನಲ್ಲೇ ಕುಳಿತು ವ್ಯಾಪಾರ ವಹಿವಾಟು ಮಾಡುವ ದುಸ್ಥಿತಿ ಬಂದೊದಗಿದೆ. ಕೂಡಲೇ ವಾರದ ಸಂತೆ ಪ್ರದೇಶ ಅಭಿವೃದ್ಧಿಗೊಳಿಸಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ಪಟ್ಟಣದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಸಾರ್ವಜನಿಕ ಸಮಾರಂಭಗಳಿಗೆ ಅನುಕೂಲವಾಗಲೆಂದು ಸಾಂಸ್ಕೃತಿಕ ಭವನ ನಿರ್ಮಿಸಲಾಗಿದೆ. ಆದರೆ ಭವನದ ನಿರ್ವಹಣೆ ನಿರ್ಲಕ್ಷ್ಯದಿಂದ ಮದ್ಯವಸನಿಗಳ ತಾಣವಾಗಿದೆ. ಅಲ್ಲದೆ ಕಿಡಿಗೇಡಿಗಳು ಭವನದ ಬೀಗ ಮುರಿದು ಅಲ್ಲಿನ ವಸ್ತುಗಳನ್ನು ಹಾಳು ಮಾಡಿದ್ದಾರೆ. ಭವನದ ಮೇಲ್ಛಾವಣಿಯ ಥರ್ಮಾಕೂಲ್ ಕಿತ್ತು ಹೋಗಿದ್ದು, ವಿದ್ಯುತ್ ಸಂಪರ್ಕವಿಲ್ಲದೆ ಸಮಾರಂಭ ಆಯೋಜಿಸಲು ತೊಂದರೆಯಾಗಿದೆ. ಪುರಸಭೆ ಅಧಿಕಾರಿಗಳು ಭವನ ದುರಸ್ತಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸೇನೆ ತಾಲೂಕು ಅಧ್ಯಕ್ಷ ಶಿವರಾಜ ನಾಯಕ, ಉಪಾಧ್ಯಕ್ಷ ಚಂದ್ರು ನಾಯಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಖಜಾಂಚಿ ವೆಂಕಟೇಶ ಗುಡದನಾಳ, ರಾಜು ಪತ್ತಾರ, ಶಿವರಾಜ ಪತ್ತಾರ, ದೇವೇಂದ್ರ ನಾಯಕ, ಚಂದ್ರು ಬಂಡಿ, ವೀರೇಶ ನಾಯಕ, ಕೃಷ್ಣಾ ಭೋವಿ, ಬಸವಲಿಂಗ, ದುರ್ಗೇಶ, ಮಂಜುನಾಥ, ಕೇದಾರ, ರಾಜು ನಾಯಕ ಇದ್ದರು.