Saif Ali Khan ಮೇಲೆ ದಾಳಿ ಕೇಸ್​; ಮತ್ತಿಬ್ಬರು ಶಂಕಿತರನ್ನು ಬಂಧಿಸಿದ ಪೊಲೀಸರು

Saif Ali Khan
Published on

ಮುಂಬೈ: ನಟ ಸೈಫ್​ ಅಲಿ ಖಾನ್​ (Saif Ali Khan) ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಛತ್ತೀಸ್​ಗಢ ಹಾಗೂ ಥಾಣೆಯಲ್ಲಿ ಇಬ್ಬರು ಶಂಕಿತರನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಇವರಿಬ್ಬರನ್ನು ಮುಂಬೈಗೆ ಕರೆತರಲಾಗುತ್ತಿದ್ದು, ಮತ್ತಷ್ಟು ವಿಚಾರ ತಿಳಿದು ಬರಬೇಕಿದೆ.

ಬಂಧಿತರ ಪೈಕಿ ಓರ್ವನನ್ನು ಆಕಾಶ್​ ಕೈಲಾಶ್​ ಕನೋಜಿಯಾ (31) ಎಂದು ತಿಳಿದು ಬಂದಿದ್ದು, ಈತನನ್ನು ಛತ್ತೀಸ್​ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಶಂಕಿತ ಆರೋಪಿಯು ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್​ನಲ್ಲಿ ತೆರಳುತ್ತಿದ್ದ ಎಂದು ರೈಲ್ವೆ ಪೊಲೀಸರು ಹೇಳಿದ್ದು, ಮುಂಬೈ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರ್​ಪಿಎಫ್​ ಜವಾನ್​ ಒಬ್ಬರು ತಿಳಿಸಿದ್ದಾರೆ. 

ಘಟನೆ ಕುರಿತು ಮಾಹಿತಿ ನೀಡಿರುವ ಆರ್​ಪಿಎಫ್​ನ ಹಿರಿಯ ಅಧಿಕಾರಿಯೊಬ್ಬರು, ಶನಿವಾರ (ಜನವರಿ 19) ಮಧ್ಯಾಹ್ನ 2 ಗಂಟೆ ಸುಮಾರಿಗೆ ದುರ್ಗ್‌ ರೈಲು ನಿಲ್ದಾಣ ತಲುಪಿದ್ದ ಶಂಕಿತ ಜನರಲ್‌ ಕಂಪಾರ್ಟ್ಮೆಂಟ್‌ನಲ್ಲಿ ಕುಳಿತಿದ್ದ. ಆತನ ಬಳಿ ಯಾವುದೇ ಕಿಟ್‌ ಇರಲಿಲ್ಲ. ಆಕಾಶ್‌ ಕೈಲಾಶ್‌ನನ್ನ ನೋಡಿದ ಆರ್‌ಪಿಎಫ್ ಸಿಬ್ಬಂದಿ ಅನುಮಾನಗೊಂಡು ಕೆಳಗಿಳಿಸಿ, ವಿಚಾರಿಸಿದ್ದಾರೆ.

Saif Ali Khan

ಮೊದಲು ನಾಗ್ಪುರಕ್ಕೆ ಹೋಗುವುದಾಗಿ ಹೇಳಿದ್ದ ಶಂಕಿತ, ವಿಚಾರಣೆ ವೇಳೆ ಬಿಲಾಸ್‌ಪುರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ ಇದರಿಂದ ಅಧಿಕಾರಿಗಳ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಮೊದಲೇ ಶಂಕಿತನ ಫೋಟೋ, ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ ಹಾಗೂ ಖಚಿತ ಸ್ಥಳದ ಮಾಹಿತಿ ಪಡೆದಿದ್ದ ಸಿಬ್ಬಂದಿ ಆತನನ್ನು ಬಂಧಿಸಿದ್ಧಾರೆ ಎಂದು ಆರ್​ಪಿಎಫ್​ನ ಹಿರಿಯ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ. 

ಇನ್ನೂ ಸೈಫ್​ ಅಲಿ ಖಾನ್​ (Saif Ali Khan) ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಥಾಣೆಯಲ್ಲಿ ಓರ್ವ ಶಂಕಿತನನ್ನು ಅರೆಸ್ಟ್​ ಮಾಡಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರ ಪೈಕಿ ಯಾರು ಕೃತ್ಯ ಎಸಗಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಆರೋಪಿಯನ್ನು ಬಂಧಿಸುವುದಕ್ಕೆ ಪೊಲೀಸರು 20ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net