ಜೀವ ಉಳಿಸಿದ ಆಟೋ ಚಾಲಕನಿಗೆ ಸೈಫ್ ಕೊಟ್ಟ ಹಣವೆಷ್ಟು? ನನ್ನ ಜೀವನವೇ ಬದಲಾಯ್ತು ಎಂದ ಭಜನ್​ ಸಿಂಗ್! Saif Ali Khan

Saif Ali Khan
Published on

Saif Ali Khan : ನನ್ನ ಜೀವನವೇ ಬದಲಾಗಿದೆ... ಇದು ಚಾಕು ದಾಳಿಗೆ ಒಳಗಾದ ಬಾಲಿವುಡ್ ನಟ ​ಸೈಫ್ ಅಲಿ ಖಾನ್ ಅವರನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್​ ಸಿಂಗ್​ ರಾಣಾ ಅವರು ಹೇಳಿದ ಮಾತುಗಳು.

ಕಳೆದ ವಾರ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸೈಫ್​ ಅಲಿ ಖಾನ್​, ಚಾಕುವಿನಿಂದ ಹಲ್ಲೆಗೊಳಗಾದ ನಂತರ ಆಟೋ ಚಾಲಕ ಭಜನ್ ಸಿಂಗ್, ಸೈಫ್​ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಹೀಗಾಗಿ ಇತ್ತೀಚೆಗಷ್ಟೇ ಸೈಫ್​, ಭಜನ್​ ಸಿಂಗ್​ರನ್ನು ತಮ್ಮ ಬಳಿಗೆ ಕರೆಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸೈಫ್, ಚಾಲಕನಿಗೆ ಆರ್ಥಿಕ ಸಹಾಯ ಮಾಡಿದ್ದಾರೆಂದು ಹೇಳಲಾಗಿದೆ. ಎಷ್ಟು ಹಣ ಕೊಟ್ಟಿದ್ದಾರೆಂಬುದು ಬಹಿರಂಗವಾಗಿಲ್ಲ. ಆದರೆ, ಸುಮಾರು 50,000 ರೂ. ಕೊಟ್ಟಿದ್ದಾರೆಂದು ರಾಷ್ಟ್ರೀಯ ಪೋರ್ಟಲ್ ಒಂದು ವರದಿ ಮಾಡಿದೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಹಣವನ್ನು ಸೈಫ್​ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಉತ್ತರಾಖಂಡ ಮೂಲದ ಭಜನ್​ ಸಿಂಗ್​, ನಾನು ಅವರಿಗೆ (ಸೈಫ್) ಭರವಸೆ ನೀಡಿದ್ದೇನೆ ಮತ್ತು ನಾನು ಅದನ್ನು ಪಾಲಿಸುತ್ತೇನೆ. ಅವರು (ಸೈಫ್) ನನಗೆ 50,000 ಅಥವಾ 1,00,000 ರೂಪಾಯಿ ನೀಡಿದರು ಎಂದು ಜನರು ಹೇಳಬಹುದು. ಆದರೆ, ಅವರು ಎಷ್ಟು ಹಣ ನೀಡಿದರು ಎಂದು ನಾನು ಹೇಳಲು ಬಯಸುವುದಿಲ್ಲ ಎಂದರು.

ಹಣದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಡಿ ಎಂದು ಸೈಫ್​ ಅವರು ನನ್ನನ್ನು ವಿನಂತಿಸಿಕೊಂಡರು. ನಾನು ಅವರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ಏನೇ ಆದರೂ, ಅವರು ಏನೇ ಕೊಟ್ಟರೂ ಅದು ಅವರ ಮತ್ತು ನನ್ನ ನಡುವೆ ಮಾತ್ರ ಇರುತ್ತದೆ ಎಂದು ಭಜನ್​ ಸಿಂಗ್​ ಹೇಳಿದರು.

ನಾನು ಅವರನ್ನು (ಸೈಫ್) ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿಯಾದೆ. ನನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಕ್ಕಾಗಿ ಧನ್ಯವಾದ ಹೇಳಲು ಅವರು ಕರೆ ಮಾಡಿದರು. ಸೈಫ್​ ಅವರು ನನ್ನನ್ನು ಅವರ ತಾಯಿಗೆ (ಶರ್ಮಿಳಾ ಟ್ಯಾಗೋರ್) ಪರಿಚಯಿಸಿದರು. ನಾನು ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದೆ. ಬಳಿಕ ಅವರಿಗೆ ಅನಿಸಿದ್ದನ್ನು ನನಗೆ ನೀಡಿದರು ಮತ್ತು ನನಗೆ ಸಹಾಯ ಬೇಕಾದಾಗಲೆಲ್ಲ ಜತೆಯಲ್ಲಿ ಇರುವುದಾಗಿ ಭರವಸೆ ನೀಡಿದರು ಎಂದು ಭಜನ್​ ಸಿಂಗ್​ ಹೇಳಿದ್ದಾರೆ.

ಸೈಫ್ ಅಲಿ ಖಾನ್ ಅವರನ್ನು ತಮ್ಮ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಸುದ್ದಿಯ ನಂತರ, ಮಾಧ್ಯಮಗಳು, ಸ್ನೇಹಿತರು ಮತ್ತು ಸಂಬಂಧಿಕರಿಂದ ನನಗೆ ತುಂಬಾ ಕರೆಗಳು ಬರಲು ಪ್ರಾರಂಭಿಸಿದವು ಎಂದು ರಾಣಾ ಇದೇ ಸಂದರ್ಭದಲ್ಲಿ ಹೇಳಿದರು.

ವಿಶ್ರಾಂತಿಯಲ್ಲಿ ಸೈಫ್​ ಅಲಿ ಖಾನ್

ಅಪರಿಚಿತ ವ್ಯಕ್ತಿಯಿಂದ ತಮ್ಮ ಮನೆಯಲ್ಲೇ ಚಾಕು ದಾಳಿಗೆ ಒಳಗಾಗಿ, ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಬಾಲಿವುಡ್​ ಖ್ಯಾತ ನಟ ಸೈಫ್​ ಅಲಿ ಖಾನ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಸೈಫ್​ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸೈಫ್​ ಅಲಿ ಖಾನ್​ ಅವರ ಮನೆಯಲ್ಲಿ ಈ ದಾಳಿ ನಡೆದಿತ್ತು. ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆಹ್​ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು, 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೈಫ್​ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಬೆನ್ನುಹುರಿ ಸೇರಿದಂತೆ ಸುಮಾರು 6 ಸ್ಥಳಗಳಲ್ಲಿ ಗಾಯಗಳಾಗಿತ್ತು. ವೈದ್ಯರು 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು. ಆಪರೇಷನ್​ ಯಶಸ್ವಿಯಾಗಿದ್ದು, ಡಿಸ್ಚಾರ್ಜ್​ ಆಗಿದ್ದಾರೆ. ಸುಮಾರು 1 ತಿಂಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ಸೂಚನೆ ನೀಡಿದ್ದಾರೆ.

ಸೈಫ್​ ಮೇಲೆ ದಾಳಿ ಮಾಡಿದ ಆರೋಪಿಯನ್ನು ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ನಿವಾಸಿ. ಅಷ್ಟೇ ಅಲ್ಲ, ಆತ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಕೂಡ ಹೌದು. ಕಳೆದ ಬುಧವಾರ (ಜ.15) ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದ. ಸೈಫ್-ಕರೀನಾ ಅವರ ಕಿರಿಯ ಮಗನನ್ನು ಕಿಡ್ನಾಪ್​ ಮಾಡಲು ಮನೆಗೆ ನುಗ್ಗಿದ್ದಾಗಿ ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಕಿಡ್ನಾಪ್​ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವುದು ಖದೀಮ ಉದ್ದೇಶವಾಗಿತ್ತು. ಈ ವೇಳೆ ಸೈಫ್​ ಮಗನನ್ನು ಕಾಪಾಡಿದರು. ಆದರೆ, ಖದೀಮ ಮಾತ್ರ ಸೈಫ್​ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net