Saif Ali Khan : ಕಿಡಿಗೇಡಿಯೊಬ್ಬ ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಘಟನೆ ಬಾಲಿವುಡ್ ಮಂದಿಯನ್ನು ಆಘಾತಕ್ಕೆ ದೂಡಿದೆ. ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ವೇಳೆ ಗಂಭಿರವಾಗಿ ಗಾಯಗೊಂಡ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತ ದಾಳಿಕೋರ ಪರಾರಿಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸೈಫ್ ಅಲಿ ಖಾನ್ ಅವರು ದೇಶಾದ್ಯಂತ ತನ್ನದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಘಟನೆಯಿಂದ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ನೆಚ್ಚಿನ ನಟನ ಆರೋಗ್ಯ ಸ್ಥಿತಿಗೆ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳು ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಲೀಲಾವತಿ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿದ್ದಾರೆ.
ಸೈಫ್ ಅಲಿ ಖಾನ್ ಅವರ ದೇಹದ ಮೇಲೆ ಆರು ಇರಿತದ ಗಾಯಗಳಿದ್ದು, ಅವುಗಳಲ್ಲಿ ಎರಡು ಆಳವಾದ ಮತ್ತು ಗಂಭೀರವಾಗಿದ್ದವು. ಅವರ ಕುತ್ತಿಗೆ ಮತ್ತು ಬೆನ್ನುಮೂಳೆಯ ಆಳಕ್ಕೆ ಇರಿತದ ಗಾಯಗಳಾಗಿವೆ. ಸದ್ಯ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ. ಸೈಫ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇದರ ನಡುವೆ ಸೈಫ್ ಅಲಿ ಖಾನ್ ಅವರ ತಂಡವು ಕೂಡ ಅಭಿಮಾನಿಗಳಿಗಾಗಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸೈಫ್ ಅಲಿ ಖಾನ್ ಅವರ ಮನೆಯನ್ನು ದರೋಡೆ ಮಾಡಲು ಪ್ರಯತ್ನ ನಡೆದಿತ್ತು. ಈ ವೇಳೆ ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಪೊಲೀಸರಿಗೆ ಸಂಬಂಧಿಸಿದ ವಿಷಯವಾದ್ದರಿಂದ ಅಭಿಮಾನಿಗಳು ತಾಳ್ಮೆಯಿಂದಿರಲು ವಿನಂತಿಸುತ್ತೇವೆ. ಪರಿಸ್ಥಿತಿಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಸೈಫ್ ಮೇಲಿನ ದಾಳಿಯ ತನಿಖೆಗಾಗಿ ಮುಂಬೈನ ಕ್ರೈಂ ಬ್ರಾಂಚ್ ತಂಡ ಮೊದಲು ಸೈಫ್ ಅಲಿ ಖಾನ್ ಅವರ ಮನೆಗೆ ತಲುಪಿ, ಮೂವರು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದೆ. ಇದಾದ ನಂತರ, ವಿಧಿವಿಜ್ಞಾನ ತಂಡವು ಸೈಫ್ ಅವರ ಮನೆಯನ್ನು ತಲುಪಿ, ಪರಿಶೀಲನೆ ನಡೆಸಿದೆ. ಮುಂಬೈ ಪೊಲೀಸರಿಗೆ ಮನೆಗೆಲಸದವರ ಪಾತ್ರದ ಬಗ್ಗೆ ಅನುಮಾನಗಳಿವೆ. ಹೀಗಾಗಿ ವಿಚಾರಣೆ ತೀವ್ರಗೊಳಿಸಿದ್ದಾರೆ. (ಏಜೆನ್ಸೀಸ್)