

ಕುಂಬಳೆ: ಕಾಸರಗೋಡು ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲಾ 28ನೇ ವಾರ್ಷಿಕೋತ್ಸವವು ಜ.19ರಂದು ಕಾಸರಗೋಡು ಬೀರಂತಬೈಲು ಲಲಿತ ಕಲಾಸದನದಲ್ಲಿ ಜರಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅನುಗ್ರಹದೊಂದಿಗೆ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 10ರಿಂದ ಸಂಗೀತ ಶಾಲೆಯ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ಹಾಗೂ ಶಿಷ್ಯಂದಿರಿಂದ ಸಂಗೀತೋಪಾಸನೆ ನಡೆಯಲಿದೆ. ಪಕ್ಕವಾದ್ಯದಲ್ಲಿ ವಯಲಿನ್ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ.ಮಾಯಾ ಮಲ್ಯ, ಮೃದಂಗದಲ್ಲಿ ವಿದ್ವಾನ್ ಕೋವೈ ಕಣ್ಣನ್ ಕಾಞಂಗಾಡು, ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕ್ಕೋತ್, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಟಿ.ಕೆ. ವಾಸುದೇವ ಕಾಞಂಗಾಡು ಜತೆಗೂಡಲಿದ್ದಾರೆ.
ಕಾಂತಾರ ಸಿನಿಮಾದ ವರಾಹರೂಪಂ ಖ್ಯಾತಿಯ ವಿದ್ವಾನ್ ಸಾಯಿ ವಿಘ್ನೇಶ್ ಅವರಿಂದ ಸಂಜೆ 4ಕ್ಕೆ ಪ್ರಧಾನ ಕಛೇರಿ ನಡೆಯಲಿದೆ. ವಯಲಿನ್ನಲ್ಲಿ ವಿದ್ವಾನ್ ಕರೈಕಲ್ ವೆಂಕಟಸುಬ್ರಹ್ಮಣ್ಯನ್, ಮೃದಂಗದಲ್ಲಿ ವಿದ್ವಾನ್ ಎಂ.ಎಸ್.ವೆಂಕಟಸುಬ್ರಹ್ಮಣ್ಯನ್ ಹಾಗೂ ಘಟಂನಲ್ಲಿ ವಿದ್ವಾನ್ ರಿಜು ಉಣ್ಣಿಕೃಷ್ಣನ್ ಪಾಲಕ್ಕಾಡ್ ಸಹಕರಿಸಲಿದ್ದಾರೆ ಎಂದು ಸಂಗೀತ ಶಾಲಾ ಸಂಚಾಲಕ ವಿದ್ವಾನ್ ಬಿ.ಜಿ.ಈಶ್ವರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.