

ಆಂಧ್ರಪ್ರದೇಶ: 'ಮಗಧೀರ', 'ಆರ್ಆರ್ಆರ್' ಖ್ಯಾತಿಯ ನಟ ರಾಮ್ಚರಣ್ ಅಭಿನಯಿಸಲಿರುವ ಬಹುನಿರೀಕ್ಷಿತ ಮುಂದಿನ ಸಿನಿಮಾ 'ಆರ್ಸಿ16' ಚಿತ್ರದ ಬಗ್ಗೆ ಇದೀಗ ಹೊಸದೊಂದು ಮಾಹಿತಿ ಲಭಿಸಿದ್ದು, ರಾಮ್ಗೆ ಜೋಡಿಯಾಗಿ ಟಾಲಿವುಡ್ನ ಖ್ಯಾತ ನಟಿಯೊಬ್ಬರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ತಾತ್ಕಾಲಿಕವಾಗಿ 'RC16' ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕೆ ನಾಯಕಿಯಾಗಿ ಟಾಲಿವುಡ್ನ ನ್ಯಾಚುರಲ್ ಬ್ಯೂಟಿ, ನಟಿ ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಸದ್ಯ ಈ ಸಂಗತಿ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ತೆರೆ ಮೇಲೆ ರಾಮ್ ಚರಣ್ ಮತ್ತು ಪಲ್ಲವಿ ಅವರ ಜೋಡಿ ಹೇಗೆ ಮೋಡಿ ಮಾಡಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರೊಟ್ಟಿಗೆ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ರಾಮ್ ಚರಣ್ 'ಗೇಮ್ ಚೇಂಜರ್' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಈ ಚಿತ್ರವನ್ನು ತಮಿಳು ನಿರ್ದೇಶಕ ಎಸ್. ಶಂಕರ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಆ್ಯಕ್ಷನ್ ಜಾನರ್ ಒಳಗೊಂಡ ಸಿನಿಮಾವಾಗಿದ್ದು, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ರಾಮ್ಚರಣ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 2024ಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ ತಾತ್ಕಾಲಿಕವಾಗಿ ತಿಳಿಸಿದೆ,(ಏಜೆನ್ಸೀಸ್).