ಮಹಾರಾಷ್ಟ್ರದಲ್ಲಿ ಮಣ್ಣು ಉಳಿಸಿ ಅಭಿಯಾನ; ಆದಿತ್ಯ ಠಾಕ್ರೆ-ಸದ್ಗುರು ನಡುವೆ MoU

WhatsApp Image 2022-06-13 at 10.00.42 PM (1)
Published on

ಮುಂಬೈ: ನಗರದಲ್ಲಿ ನಡೆದ ಮಣ್ಣನ್ನು ಉಳಿಸಿ ಅಭಿಯಾನದ ಕಾರ್ಯಕ್ರಮದಲ್ಲಿ ಮಣ್ಣನ್ನು ಉಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಒಳಗೊಂಡಿರುವ MoU ಒಪ್ಪಂದವನ್ನು ಮಹಾರಾಷ್ಟ್ರದ ಪರಿಸರ ಮಂತ್ರಿ ಆದಿತ್ಯ ಠಾಕರೆ ಮತ್ತು ಸದ್ಗುರು ಮಾಡಿಕೊಂಡರು.

ಸದ್ಗುರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿ ಅವರಿಗೆ ಮಣ್ಣಿನ ನೀತಿಯ ಕೈಪಿಡಿಯನ್ನು ನೀಡಿದರು. ಮಣ್ಣನ್ನು ಉಳಿಸಿ ಅಭಿಯಾನದ ಬೃಹತ್ ಕಾರ್ಯಕ್ರಮದಲ್ಲಿ ಜೂಹಿ ಚಾವ್ಲಾ, ಮೀಟ್ ಬ್ರದರ್ಸ್, ಮೌನಿ ರಾಯ್, ಮುಂತಾದ ತಾರೆಯರು ಉಪಸ್ಥಿತರಿದ್ದರು.

MoU ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಮಣ್ಣನ್ನು ಉಳಿಸಿ ಜಾಗತಿಕ ಅಭಿಯಾನದಲ್ಲಿ ಭಾಗಿಯಾಗುತ್ತಿರುವ ಐದನೇ ರಾಜ್ಯವಾದ ಮಹಾರಾಷ್ಟ್ರ ಮಣ್ಣಿನ ಸಂರಕ್ಷಣೆಗೆ ಬೆಂಬಲ ಸೂಚಿಸಿತು. ಮುಂಬೈ ಮಹಾನಗರಿಯಲ್ಲಿರುವ ಜಿಯೋ convention ಸೆಂಟರಿನಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 10,000 ಜನರು ಹಾಜರಾಗಿದ್ದರು. ಈ ಬೃಹತ್ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಪರಿಸರ ಮಂತ್ರಿ ಆದಿತ್ಯ ಠಾಕರೆ ಮತ್ತು ಸದ್ಗುರು MoU ಒಪ್ಪಂದವನ್ನು ಮಾಡಿಕೊಂಡರು.

"ನಮ್ಮ ಭೂಮಿ ನಮ್ಮೆಲ್ಲರ ಸಂಪತ್ತು ಮತ್ತು ಜವಾಬ್ದಾರಿ. ಸದ್ಗುರು ಅವರೊಂದಿಗೆ ಈ ವೇದಿಕೆಯನ್ನು ನಾನು ಹಂಚಿಕೊಳ್ಳಲು ಬಹಳ ಹೆಮ್ಮೆ ಎನಿಸುತ್ತಿದೆ. ಹಾಗೆಯೇ, ಪರಿಸರದ ಬಗ್ಗೆ ನಮಗಿರುವ ಕಾಳಜಿ ಮತ್ತು ಬದ್ಧತೆಯನ್ನು ಈಶಾ ಸಂಸ್ಥೆ ಮುಂದಳುತ್ವ ವಹಿಸಿದ ಮಣ್ಣನ್ನು ಉಳಿಸಿ ಜಾಗತಿಕ ಅಭಿಯಾನಕ್ಕೆ ಮಹಾರಾಷ್ಟ್ರ ಬೆಂಬಲ ಸೂಚಿಸುವ ಮೂಲಕ ಪುನರುಚ್ಚರಿಸಿದೆ," ಎಂದು ಮಹಾರಾಷ್ಟ್ರದ ಪರಿಸರ ಮಂತ್ರಿ ಆದಿತ್ಯ ಠಾಕ್ರೆ ಹೇಳಿದರು. ಇದಕ್ಕು ಮೊದಲು, ಸದ್ಗುರು ಅವರು ಮಣ್ಣಿನ ನೀತಿಯ ಕೈಪಿಡಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ ಉದ್ಧವ್ ಠಾಕ್ರೆಯವರಿಗೆ ನೀಡಿದರು. ಮಾನ್ಯ ಮುಖ್ಯಮಂತ್ರಿ ತಮ್ಮ ಸಂಪೂರ್ಣ ಬೆಂಬಲವನ್ನು ಈ ಅಭಿಯಾನಕ್ಕೆ ಸೂಚಿಸಿದರು. ಈ ಕೈಪಿಡಿಯಲ್ಲಿ ಸರಕಾರವು ಆ ರಾಜ್ಯದಲ್ಲಿ ಮಣ್ಣನ್ನು ಉಳಿಸಲು ಮಾಡಬಹುದಾದ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಹಾರಗಳನ್ನು ಕೊಡಲಾಗಿದೆ.

ತಮ್ಮ 100 ದಿನದ ಪ್ರಯಾಸಕರ ಬೈಕಿನ ಪಯಣದ ಬಗ್ಗೆ ಸದ್ಗುರು ಹೇಳಿದ್ದು ಹೀಗೆ: "ನನ್ನ ಪ್ರಾಣ ಒತ್ತೆ ಇಡುವೊಂದೇ ದಾರಿ ಎಂದು ಅನಿಸಿತು. ಆಗಲಾದರೂ ಜನರು ಎಚ್ಚೆತ್ತು ಕ್ರಮವನ್ನು ತೆಗೆದುಕೊಳ್ಳಬಹುದು."ಮೂರು ತಿಂಗಳ ಹಿಂದೆ ಮಣ್ಣು ಜನಪ್ರಿಯ ವಿಷಯವಾಗಿರಲಿಲ್ಲ. ಆದರೆ ತಮ್ಮ ಪಯಣ ಶುರುವಾದ ಮೇಲೆ ಸುಮಾರು 2.8 ಬಿಲಿಯನ್ ಜನರು ಸ್ಪಂದಿಸಿದ್ದಾರೆ," ಎಂದು ಸದ್ಗುರು ಹೇಳಿದರು.

ಮಣ್ಣಿನ ಬಗ್ಗೆ ತಮ್ಮ ಕಾಳಜಿಯನ್ನು ಸೂಚಿಸುತ್ತಾ ಆದಿತ್ಯ ಠಾಕ್ರೆ "ಈಗ ಈ ಸಮಸ್ಯೆಯ ಬಹಳ ಪ್ರಮುಖ ಹಂತಕ್ಕೆ ಬಂದು ಮುಟ್ಟಿದ್ದೇವೆ. ಇಂದಿನ ಪೀಳಿಗೆಗೆ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ಪೀಳಿಗೆ ನಶಿಸಿ ಹೋಗುವುದು. ನಾವೆಲ್ಲ ಮಣ್ಣಿನಿಂದಲೇ ಬಂದಿದ್ದೇವೆ, ಮರಳಿ ಮಣ್ಣನ್ನು ಸೇರುತ್ತೇವೆ. ನಾವೆಲ್ಲ ಮಣ್ಣು," ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದ ಖ್ಯಾತ ಬಾಲಿವುಡ್ ತಾರೆ ಮತ್ತು ಪರಿಸರವಾದಿ ಜೂಹಿ ಚಾವ್ಲಾ ತಾವು ಕಾವೇರಿ ಕೂಗಿನ ಯೋಜನೆಗಳಡಿಯಲ್ಲಿ ಇರುವ ಕೃಷಿಕ್ಷೇತ್ರಗಳಿಗೆ ಭೇಟಿ ಕೊಟ್ಟ ಬಗ್ಗೆ ತಿಳಿಸಿದರು. ಅಲ್ಲಿ ಹೇಗೆ ಕೃಷಿ ಅರಣ್ಯಗಳು ಕೃಷಿಕರ ಅದೃಷ್ಟವನ್ನು ಬದಲಾಯಿಸುತ್ತಿವೆ ಎಂದು ತಾವು ನೋಡಿದ್ದನ್ನು ಹಂಚಿಕೊಂಡರು. ಬಿಸಿಲು, ಮಳೆ, ಮರಳು ಬಿರುಗಾಳಿ, ಹಿಮ - ಇವು ಯಾವುದನ್ನು ಲೆಕ್ಕಿಸದೆ ಸದ್ಗುರು ಕೈಗೊಂಡ 100 ದಿನದ 3000 ಕಿಲೋಮೀಟರುಗಳ ಪಯಣದ ಬಗ್ಗೆ ಅಭಿಮಾನ ಸೂಚಿಸುತ್ತಾ, "ನೀವು ಇದೆಲ್ಲವನ್ನೂ ನಿಮ್ಮ ಸ್ವಾರ್ಥದ ಸಲುವಾಗಿ ಮಾಡುತ್ತಿಲ್ಲ. ಇದೆಲ್ಲವೂ ನಮಗೋಸ್ಕರ, ನಾವು ಬಹಳ ಪ್ರೀತಿಸುವ ನಮ್ಮ ಮಕ್ಕಳಿಗೋಸ್ಕರ," ಎಂದು ಹೇಳಿ ಅವರಿಗೆ ವಂದನೆಗಳನ್ನು ತಿಳಿಸಿದರು.

ನೆಲದ ಮೇಲಿನ 15-18 ಇಂಚುಗಳಷ್ಟು ಮಣ್ಣು ಜಗತ್ತಿನಲ್ಲಿ ಅತ್ಯಂತ ಮುಖ್ಯವಾದ ವಸ್ತು ಎಂದು ಸದ್ಗುರು ಹೇಳಿದರು. "ಕಳೆದ 40-50 ವರುಷಗಳಲ್ಲಿ ಶೇಖಡಾ 52 ರಷ್ಟು ಮೇಲಿನ ಮಣ್ಣನ್ನು ನಾವು ಕಳೆದುಕೊಂಡಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಇಂಚಿನ ಮಣ್ಣನ್ನು ನಾವು ಮಾಡಲು 130000 ವರುಷಗಳು ತಗಲುತ್ತವೆ," ಎಂದು ಸದ್ಗುರು ಎಚ್ಚರಿಸಿದರು. ಬರಗಾಲದ ಭೀಕರ ದುರಂತಗಳನ್ನು ತಪ್ಪಿಸಿದ ಹಸಿರು ಕ್ರಾಂತಿ ಮತ್ತು ಅದರ ವಿಧಾನಗಳನ್ನು ಶ್ಲಾಘಿಸುತ್ತಾ ಕೃಷಿ ನೀತಿಗಳು ಬದಲಾಗಬೇಕು ಎಂದು ಅವರು ಹೇಳಿದರು. "ನಮ್ಮ ಗ್ರಹವನ್ನು ಹಾಳು ಮಾಡುತ್ತಿರುವುದು ಒಬ್ಬರಲ್ಲ. ನಾವೆಲ್ಲಾ ಒಟ್ಟಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದನ್ನು ಹಾಳು ಮಾಡಲು ಹೊರಟಿದ್ದೇವೆ," ಎಂದು ಸದ್ಗುರು ಒತ್ತಿ ಹೇಳಿದರು. ನಾವೆಲ್ಲಾ ಒಂದಾಗಿ ಪರಿಹಾರಕ್ಕಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಈ ಬೃಹತ್ ಕಾರ್ಯಕ್ರಮದಲ್ಲಿ ಮೌನಿ ರಾಯ್, ರಿತ್ವಿಕ್ ದಂಜಾನಿ, ದಿವ್ಯಾಂಕ ತ್ರಿಪಾಠಿ, ಮತ್ತು ಹಲವು ತಾರೆಯರು ಪಾಲ್ಗೊಂಡಿದ್ದರು. ಮಣ್ಣನ್ನು ಉಳಿಸಿ ಅಭಿಯಾನದ ಈಗಿನ ಜನಪ್ರಿಯ ಹಾಡಾದ "ಬಂದೆಯಾ" ಹಾಡಿಗೆ ಮೀಟ್ ಬ್ರದರ್ಸ್ ಅವರೊಂದಿಗೆ ಸದ್ಗುರು ದನಿಗೂಡಿಸಿದರು. ಜನಪ್ರಿಯ ಹಾಡುಗಾರ Machel ಮೊಂಟಾನಾ ತಮ್ಮ ಮಣ್ಣನ್ನು ಉಳಿಸಿ ಹಾಡುಗಳಿಂದ ಪ್ರೇಕ್ಷಕರ ಮನ ಸೆಳೆದರು. ಈ ಅಭಿಯಾನದ ಎಲ್ಲಾ ಕಾರ್ಯಕ್ರಮಗಳ ಪ್ರಮುಖ ಭಾಗವಾದ ಭರತನಾಟ್ಯ ಕಲಾವಿದೆ, ಶ್ರೀಮತಿ ರಾಧೆ ಜಗ್ಗಿ ಈಶ ಸಂಸ್ಕೃತಿ ಕಲಾವಿದರೊಂದಿಗೆ ಶಾಸ್ತ್ರೀಯ ನೃತ್ಯ ಮತ್ತು ಕಲರಿಪಾಯಟ್ಟುವಿನ ಸಂಗಮದ ಮೂಲಕ ಮಾನವ ಹಾಗೂ ಮಣ್ಣಿನ ಸಂಬಂಧವನ್ನು ಪ್ರಸ್ತುತ ಪಡಿಸಿದರು.

ಭಾರತದಲ್ಲಿ ಶೇಖಡಾ 30ರಷ್ಟು ಮಣ್ಣು ಈಗಾಗಲೇ ಬೆಳೆಯನ್ನು ಬೆಳೆಯಲು ಅಸಮರ್ಥವಾಗಿದೆ. ಇದರ ಬಗ್ಗೆ ತಿಳಿವಳಿಕೆಯನ್ನು ಜನರಿಗೆ ಕೊಡಲು ಈ ಅಭಿಯಾನ ಕೆಲಸ ಮಾಡುತ್ತಿದೆ.ಕೃಷಿ ಭೂಮಿಗಳಲ್ಲಿ ಕನಿಷ್ಠ 3-6% ಸಾವಯವ ಅಂಶವಿರಬೇಕು ಎಂಬ ನೀತಿಯನ್ನು ದೇಶಗಳು ತರಬೇಕು ಎಂಬುದೇ ಮಣ್ಣನ್ನು ಉಳಿಸಿ ಅಭಿಯಾನದ ಮುಖ್ಯ ಉದ್ದೇಶ. ಈ ಕನಿಷ್ಠ ಸಾವಯವ ಅಂಶ ಇಲ್ಲದಿದ್ದಲ್ಲಿ ಮಣ್ಣಿನ ಸಾವು ಖಚಿತ ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಮಣ್ಣನ್ನು ಉಳಿಸಿ ಅಭಿಯಾನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಸದ್ಗುರು ಅವರ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತಾ ಅವರು ಈ ಅಭಿಯಾನದ ಪ್ರಾಮುಖ್ಯತೆ ಮತ್ತು ಅಗತ್ಯವನ್ನು ಗುರುತಿಸಿದರು. ಸದ್ಗುರು ಭಾರತಕ್ಕೆ ಆಗಮಿಸಿದ ಮೇಲೆ ಗುಜರಾತ್, ರಾಜಸ್ಥಾನ್, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಈಗಾಗಲೇ ಬೆಂಬಲ ಸೂಚಿಸಿ ಮಣ್ಣನ್ನು ಉಳಿಸಲು ಬೇಕಾದ ಕ್ರಮಗಳನ್ನು ಜರುಗಿಸುವ ಆಶ್ವಾಸನೆ ಕೊಟ್ಟಿವೆ.


ಮಾರ್ಚ್ 21ರಂದು ಶುರುವಾದ ಯೂರೋಪ್, ಸೆಂಟ್ರಲ್ ಏಷ್ಯಾ, ಮಿಡಲ್ ಈಸ್ಟ್ನಲ್ಲಿ 26 ದೇಶಗಳಲ್ಲಿ ಮಣ್ಣನ್ನು ಉಳಿಸುವ ಯಾತ್ರೆಯನ್ನು ಪೂರೈಸಿ ಬಂದ ಸದ್ಗುರು ಗುಜರಾತಿನ ಜಾಮ್ನಗರ ವನ್ನು ಮೇ 29ರಂದು ತಲುಪಿದರು. ಅಂದಿನಿಂದ ಅವರು ಗುಜರಾತ್, ರಾಜಸ್ಥಾನ್, ಉತ್ತರ ಪ್ರದೇಶ, ದೆಹಲಿ, ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಪಯಾಣಿಸಿದ್ದಾರೆ. ಜಗತ್ತಿನ 74 ರಾಷ್ಟ್ರಗಳು ಈಗಾಗಲೇ ತಮ್ಮ ತಮ್ಮ ದೇಶಗಳಲ್ಲಿ ಮಣ್ಣನ್ನು ಉಳಿಸಲು ಬೇಕಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಪಣ ತೊಟ್ಟಿವೆ. ಸದ್ಗುರು ಅವರ 27 ದೇಶಗಳ ಪಯಣ ಆರಂಭವಾದಾಗಿನಿಂದ ಸುಮಾರು 2.8 billion ಜನರು ಮಣ್ಣಿನ ಬಗ್ಗೆ ಮಾತನಾಡಿದ್ದಾರೆ. ಸುಮಾರು 15 million ಮಕ್ಕಳು ನಮ್ಮ ದೇಶದ ಪ್ರಧಾನಿಗೆ ಪತ್ರಗಳನ್ನು ಬರೆದು, ಮಣ್ಣನ್ನು ಮತ್ತು ತಮ್ಮ ಭವಿಷ್ಯವನ್ನು ಉಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net