ಪ್ಯಾಂಡೋರಾ ಪೇಪರ್ಸ್​ ವರದಿಯಲ್ಲಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್​ ಹೆಸರು

sachin
Published on

ನವದೆಹಲಿ: ತೆರಿಗೆ ಉಳಿಸಲು ವಿದೇಶಗಳಲ್ಲಿ ಹಣ ಹೂಡಿರುವ ಜಗತ್ತಿನ ವಿವಿಧ ದೇಶಗಳ ಗಣ್ಯರ ವಿವರವನ್ನು ಹೊರಗೆಳೆದಿದೆ ಎನ್ನಲಾದ ಪ್ಯಾಂಡೋರಾ ಪೇಪರ್ಸ್​ ಲೀಕ್ ವರದಿಯಲ್ಲಿ ಭಾರತದ ಕ್ರಿಕೆಟ್​ ತಾರೆ ಸಚಿನ್ ತೆಂಡುಲ್ಕರ್ ಹೆಸರೂ ಸೇರಿದೆ ಎನ್ನಲಾಗಿದೆ. ಸಚಿನ್​, ಅವರ ಪತ್ನಿ ಅಂಜಲಿ ತೆಂಡುಲ್ಕರ್ ಮತ್ತು ಮಾವ ಆನಂದ್​ ಮೆಹ್ತ ಬ್ರಿಟೀಷ್​ ವರ್ಜಿನ್ ಐಲೆಂಡ್ಸ್​ನ ಸಾಸ್​ ಇಂಟರ್​ನ್ಯಾಷನಲ್ ಲಿಮಿಟೆಡ್​ ಎಂಬ ಕಂಪೆನಿಯ ಲಾಭದಾಯಕ ಮಾಲೀಕರಾಗಿದ್ದರು ಎನ್ನಲಾಗಿದೆ.

91 ದೇಶಗಳ ಅತ್ಯಂತ ಶ್ರೀಮಂತರಾಗಿರುವ ಜಗತ್ತಿನ ಹಾಲಿ ಮತ್ತು ಮಾಜಿ ನಾಯಕರು, ರಾಜಕಾರಣಿಗಳು ಮತ್ತು ಅಧಿಕಾರಿಗಳು, ತೆರಿಗೆ ವಿನಾಯಿತಿ ಇರುವ ದೇಶಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಸಂಬಂಧವಾದ 956 ಕಂಪೆನಿಗಳ 11.9 ಮಿಲಿಯನ್​ ರಹಸ್ಯ ದಾಖಲಾತಿಗಳು ತಮ್ಮ ಕೈಸೇರಿವೆ ಎಂದು ಪನಾಮಾ ಪೇಪರ್ಸ್​​​ ತನಿಖಾ ವರದಿ ನೀಡಿರುವ 'ಇಂಟರ್​ನ್ಯಾಷನಲ್ ಕಂಸೋರ್ಟಿಯಂ ಆಫ್​ ಇನ್​ವೆಸ್ಟಿಗೇಟೀವ್ ಜರ್ನಲಿಸ್ಟ್ಸ್​' ಹೇಳಿಕೆ ನೀಡಿದೆ.

ತೆಂಡುಲ್ಕರ್​ ಅವರು ರಾಜ್ಯಸಭಾ ಸದಸ್ಯರಾಗಿದ್ದ 2012 ರಿಂದ 2018 ರವರೆಗಿನ ಅವಧಿಯ ನಾಲ್ಕು ವರ್ಷಗಳಲ್ಲಿ ಸಾಸ್​​ ಕಂಪೆನಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಕೋಟ್ಯಂತರ ರೂಪಾಯಿಗಳ ಶೇರ್​ಗಳನ್ನು ಅವರು ಹೊಂದಿದ್ದರು ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ತಿಳಿಸಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ತೆಂಡುಲ್ಕರ್​ ವಕ್ತಾರರು, ಈ ಹೂಡಿಕೆಯು ಕಾನೂನುಬದ್ಧವಾಗಿತ್ತು ಮತ್ತು ತೆರಿಗೆ ಇಲಾಖೆಗೆ ಘೋಷಿಸಲ್ಪಟ್ಟಿತ್ತು ಎಂದು ಹೇಳಿದ್ದಾರೆ ಎಂದೂ ವರದಿ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net