ಹೊಸ ಉದ್ಯಮ ಆರಂಭಿಸಿದ ಸಚಿನ್​ ತೆಂಡುಲ್ಕರ್​; ಕ್ರೀಡಾ ಉಡುಪು, ಶೂ ಬ್ರ್ಯಾಂಡ್​ 'ಟೆನ್​ ಎಕ್ಸ್​ ಯು' ಆರಂಭ

web shoe sachin
Published on

ಮುಂಬೈ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಉದ್ಯಮಿಯಾಗಿ ಹೊಸ ಇನಿಂಗ್ಸ್​ ಆರಂಭಿಸಿದ್ದಾರೆ. "ಟೆನ್​ ಎಕ್ಸ್​ ಯು' ಎಂಬ ಹೆಸರಿನ ಕ್ರೀಡಾ ಉಡುಪು ಮತ್ತು ಶೂಗಳ ಹೊಸ ಬ್ರ್ಯಾಂಡ್​ಅನ್ನು ಸಚಿನ್​ ಪರಿಚಯಿಸಿದ್ದಾರೆ.

ತಮ್ಮ ಹೊಸ ಬ್ರ್ಯಾಂಡ್​ನ ಮೊದಲ ಶೋ ರೂಮ್​ಗೆ ಸಚಿನ್​ ಪತ್ನಿ ಅಂಜಲಿ ಮತ್ತು ಪುತ್ರಿ ಸಾರಾ ತೆಂಡುಲ್ಕರ್​ ಜತೆಗೂಡಿ ಬಾಂದ್ರಾದಲ್ಲಿ ಶುಕ್ರವಾರ ಚಾಲನೆ ನೀಡಿದರು. ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಕೂಡ ಹಾಜರಿದ್ದರು. ಪ್ರಮುಖವಾಗಿ ಶೂಗಳತ್ತ ಈ ಹೊಸ ಬ್ರ್ಯಾಂಡ್​ ಗಮನಹರಿಸಿದೆ. ಕ್ರೀಡಾಪಟುಗಳ ವೃತ್ತೀಜಿವನದಲ್ಲಿ ಕಾಲಿನ ಗಾಯದ ಸಮಸ್ಯೆಗಳಿಂದ ಪಾರಾಗಲು ಸರಿಯಾದ ಶೂಗಳ ಬಳಕೆಯೂ ಅಗತ್ಯ ಎಂಬ ಸಚಿನ್​ ಅವರ ಕಾಳಜಿ ಇದಕ್ಕೆ ಕಾರಣವಾಗಿದೆ.

"ನನ್ನ ವೃತ್ತೀಜಿವನದ ಅನುಭವವನ್ನು ಆಧರಿಸಿ ಈ ಉಡುಪು ಮತ್ತು ಶೂಗಳನ್ನು ಸಿದ್ಧಪಡಿಸುತ್ತಿದ್ದೇವೆ. ಒಂದು ಜೊತೆ ಶೂಗಳನ್ನು ಸಿದ್ಧಪಡಿಸಲು 18 ತಿಂಗಳು ಬೇಕಾಗುತ್ತದೆ. ಪ್ರಮುಖವಾಗಿ ಕ್ರಿಕೆಟ್​ ಶೂಗಳಿಗೆ ಆದ್ಯತೆ ನೀಡಿದ್ದೇವೆ. ಜತೆಗೆ ಜನಸಾಮಾನ್ಯರು ಧರಿಸುವ ಶೂಗಳೂ ಲಭ್ಯವಿರುತ್ತವೆ. ಕ್ರೀಡಾಪಟುಗಳು ಮಾತ್ರವಲ್ಲ ಎಲ್ಲರೂ ಈ ಶೂಗಳನ್ನು ಬಳಸಬಹುದು' ಎಂದು 100 ಅಂತಾರಾಷ್ಟ್ರೀಯ ಕ್ರಿಕೆಟ್​ಗಳ ಶತಕಗಳ ಸರದಾರ ಸಚಿನ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net