

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಈ ಹಿಂದೆ ನಡೆದುಕೊಂಡಂತೆ ಮೋದಿಯವರು ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟವನ್ನು ಜನರು ತಿರಸ್ಕರಿಸಿದ್ದಾರೆ ಎಂಬುದನ್ನು ಸೂಚಿಸುತ್ತದೆ ಹೀಗಾಗಿ ನರೇಂದ್ರ ಮೋದಿ ಸರ್ಕಾರ ರಚಿಸಲು ಪ್ರಯತ್ನಿಸಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.
"ಬಿಜೆಪಿ ಈ ಫಲಿತಾಂಶಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. 1989 ರ ಚುನಾವಣೆಯಲ್ಲಿ ಕಾಂಗ್ರೆಸ್ 200 ಸ್ಥಾನಗಳನ್ನು ಪಡೆದುಕೊಂಡಿತ್ತು. ನಂತರ ರಾಜೀವ್ ಗಾಂಧಿ ಅವರನ್ನು ಸರ್ಕಾರ ರಚಿಸಲು ಕೇಳಲಾಯಿತು. ಜನರ ತೀರ್ಪು ತಮ್ಮ ಪರವಾಗಿಲ್ಲ ಎಂದು ಅವರು ನಿರಾಕರಿಸಿದರು. ನಂತರ ಮುಂದಿನ ದೊಡ್ಡ ಪಕ್ಷ ಕರೆಯಲಾಯಿತು ಎಂದು ನೆನಪಿಸಿಕೊಂಡರು.
ಪ್ರಸ್ತುತ ಚುನಾವಣಾ ಫಲಿತಾಂಶ ಬಿಜೆಪಿ ಮತ್ತು ಎನ್‌ಡಿಎ ವಿರುದ್ಧವಾಗಿದೆ. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 197 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಬೇಕಾದ ಬಹುಮತ ಸಿಗಲಿಲ್ಲ. ಜನತಾದಳ 143 ಸ್ಥಾನಗಳನ್ನು ಗೆದ್ದರೂ ವಿಪಿಎಸ್ ಸಿಂಗ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು ಎಂದು ಹೇಳಿದರು.
ಇನ್ನು ಈ ಚುನಾವಣೆಯ ವಿಷಯಕ್ಕೆ ಬಂದರೆ, 294 ಸ್ಥಾನಗಳೊಂದಿಗೆ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಪಡೆದುಕೊಂಡಿದೆ. ಈ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿ 240 ಸ್ಥಾನಗಳನ್ನು ಪಡೆದುಕೊಂಡಿದೆ.