ಆಂಧ್ರದ ರಾಜಕೀಯದಲ್ಲಿ ಕುತೂಹಲದ ತಿರುವು: ಮಗನ ಬಿಟ್ಟು ಮಗಳ ಕೈಹಿಡಿದ ಮುಖ್ಯಮಂತ್ರಿ ಅಮ್ಮ!

jagan
Published on

ಗುಂಟೂರು (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದಲ್ಲಿ ಕುತೂಹಲದ ಬೆಳವಣಿಗೆ ನಡೆದಿದೆ. ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಅವರ ತಾಯಿ ವೈ.ಎಸ್.ವಿಜಯಮ್ಮ ಘೋಷಿಸಿದ್ದಾರೆ. ಗುಂಟೂರು ಜಿಲ್ಲೆಯ ಚಿನಕಾಕಣಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

ಕುತೂಹಲದ ಸಂಗತಿ ಏನೆಂದರೆ, ಮಗನ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವ ಅವರು ಮಗಳ ಪರವಾಗಿ ನಿಂತಿದ್ದಾರೆ. ಅವರ ಪುತ್ರಿ, ಜಗನ್​ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಹೊಸ ಪಕ್ಷ ಕಟ್ಟಿದ್ದು, ಆಕೆಯ ಜತೆ ತಾವು ನಿಲ್ಲುವುದಾಗಿ ವಿಜಯಮ್ಮ ಹೇಳಿದ್ದಾರೆ.

ಯಾರಿಗೂ ಯಾವುದೇ ಅಭ್ಯಂತರ ಉಂಟಾಗಬಾರದು ಎಂದು ನಾನು ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದಿರುವ ವಿಜಯಮ್ಮ, ದಿ.ವೈ.ಎಸ್​.ರಾಜಶೇಖರ ರೆಡ್ಡಿ ಪತ್ನಿಯಾಗಿ ಮತ್ತು ಶರ್ಮಿಳಾ ತಾಯಿಯಾಗಿ ನಾನು ತೆಲಂಗಾಣದಲ್ಲಿ ಹೊಸ ಪಕ್ಷದ ಪರವಾಗಿ ನಿಲ್ಲುವ ಅವಶ್ಯಕತೆ ಇದೆ ಎಂದಿದ್ದಾರೆ.

ಮಗಳ ಹೊಸ ಪಕ್ಷದ ಪರವಾಗಿ ನಿಂತಿದ್ದರೂ, ಮಗ ಮತ್ತು ಮಗಳು ಬೇರೆ ಬೇರೆಯಾಗಿರುವುದಕ್ಕೆ ನೋವು ತೋಡಿಕೊಂಡಿರುವ ವಿಜಯಮ್ಮಾ, ಜಗನ್​ ಮತ್ತು ಶರ್ಮಿಳಾ ಬೇರೆ - ಬೇರೆ ಪಕ್ಷಗಳು ಮತ್ತು ರಾಜ್ಯಗಳನ್ನು ಪ್ರತಿನಿಧಿಸುವ ಅನಿರ್ವಾಯತೆ ಯಾಕೆ ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ. ಅದು ಆ ದೇವರಿಗೆ ಗೊತ್ತು. ಆದರೆ ಒಂದು ಮಾತು ಹೇಳಬಲ್ಲೆ. ಕಷ್ಟದಲ್ಲಿದ್ದಾಗ ನಾನು ಜಗನ್​ ಜತೆಗಿದ್ದೆ, ಸಂತೋಷವಾಗಿದ್ದಲೂ ನಾನು ಆತನ ಜತೆಗಿದ್ದರೆ ನನ್ನ ಮಗಳು ಶರ್ಮಿಳಾಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಇದು ನನ್ನ ಮನಸಾಕ್ಷಿಗೆ ಒಪ್ಪುವುದಿಲ್ಲ ಎಂದು ವಿಜಯಮ್ಮ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net