ನಾಯಿಗಿಟ್ಟ ಹೆಸರೇ ಮಹಿಳೆ ಜೀವಕ್ಕೆ ಕುತ್ತಾಗೋಯ್ತು! ಬೆಂಕಿಯಿಟ್ಟು ಸುಡಲು ಯತ್ನ... ಗುಜರಾತ್‌ನಲ್ಲೊಂದು ವಿಚಿತ್ರ ಘಟನೆ...

dog
Published on

ಗಾಂಧಿನಗರ (ಗುಜರಾತ್‌): ಮಹಿಳೆಯೊಬ್ಬಳು ತನ್ನ ನಾಯಿಮರಿಗೆ ಇಟ್ಟ ಹೆಸರೇ ಆಕೆಯ ಜೀವಕ್ಕೆ ಕುತ್ತಾದ ವಿಚಿತ್ರ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ನಾಯಿಯ ಹೆಸರು ಕೇಳಿ, ಕೋಪಗೊಂಡ ಪಕ್ಕದ ಮನೆಯಾತ ಮಹಿಳೆಗೆ ಬೆಂಕಿ ಹಚ್ಚಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ನೀತಾಬೆನ್​ ಸರ್ವಿಯಾ (35) ಎಂಬ ಮಹಿಳೆಯೀಗ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಅಷ್ಟಕ್ಕೂ ಆಗಿದ್ದೇನೆಂದರೆ ನಾಯಿಗೆ ನೀತಾಬೆನ್‌ ಅವರು ಸೋನು ಎಂದು ಹೆಸರಿಟ್ಟಿದ್ದರು. ದಿನವೂ ಸೋನು ಸೋನು ಎಂದು ನಾಯಿಮರಿಯನ್ನು ಕರೆಯುತ್ತಿದ್ದರು. ನಾಯಿ ಬಾಲ ಅಲ್ಲಾಡಿಸುತ್ತಾ ಬರುತ್ತಿತ್ತು. ಇದನ್ನು ನೋಡುತ್ತಿದ್ದ ಪಕ್ಕದ ಮನೆಯ ಸುರಾಭಾಯ್​ ಭಾರ್ವಾದ್‌ಗೆ ಉರಿಹತ್ತಿದೆ. ಕಾರಣವಿಷ್ಟೇ. ಆತನ ಪತ್ನಿಗೆ ಆತ ಪ್ರೀತಿಯಿಂದು ಸೋನು ಎಂದು ಕರೆಯುತ್ತಿದ್ದ. ತನ್ನ ಪತ್ನಿಯ ಹೆಸರನ್ನು ನಾಯಿಗೆ ಇಟ್ಟಿದ್ದಾಳೆ ಎಂದು ಆತನ ಸಿಟ್ಟು ನೆತ್ತಿಗೇರಿದೆ.

ಇದೇ ಕಾರಣಕ್ಕೆ ಮಹಿಳೆಗೆ ಆತ ಬೆಂಕಿ ಹಚ್ಚಿದ್ದಾನೆ. ಮೂರು ಮಕ್ಕಳ ತಾಯಿಯಾಗಿರುವ ನೀತಾಬೆನ್ ಈಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪತಿ ಮನೆಯಲ್ಲಿ ಇಲ್ಲದ ವೇಳೆ ಸುರಾಭಾಯ್​ ಭಾರ್ವಾದ್​ ಐದು ಮಂದಿಯನ್ನು ಕರೆದುಕೊಂಡು ಬಂದು ಮಹಿಳೆಯ ಮನೆಗೆ ನುಗ್ಗಿದ್ದಾನೆ, ಸೋನು ಎಂದು ನಾಯಿಗೆ ಹೆಸರು ಇಟ್ಟಿದ್ದಕ್ಕೆ ಜಗಳ ಮಾಡಿದ್ದಾನೆ. ನಂತರ ಮಾತಿನ ಚಕಮಕಿ ನಡೆದು ಅಲ್ಲಿಯೇ ಉರಿಯುತ್ತಿದ್ದ ಬೆಂಕಿ ಹಾಕಿ ಸುಡಲು ಪ್ರಯತ್ನಿಸಿದ್ದಾನೆ.

ಸೀಮೆಎಣ್ಣೆಯನ್ನು ಒಬ್ಬಾತ ಸುರಿದರೆ ಇನ್ನೊಬ್ಬ ಬೆಂಕಿಕಡ್ಡಿಯಿಂದ ಬೆಂಕಿಹಚ್ಚಿರುವುದಾಗಿ ಮಹಿಳೆ ಪೊಲೀಸರಲ್ಲಿ ದೂರಿದ್ದಾರೆ. ಕಿರುಚಾಟಕ್ಕೆ ಅಕ್ಕಪಕ್ಕದ ಮನೆಯವರು ಬಂದು ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net