

ಕೊಲ್ಹಾಪುರ (ಮಹಾರಾಷ್ಟ್ರ): ಕನ್ಯತ್ವ ಪರೀಕ್ಷೆಯಲ್ಲಿ ಅಕ್ಕ ಫೇಲ್ ಆದಳು ಎಂದು ಕಾರಣ ನೀಡಿ, ಆಕೆಯ ಜತೆ ತಂಗಿಯನ್ನೂ ಹೊರದಬ್ಬಿ ಅವರಿಂದ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟ ವಿಚಿತ್ರ ಹಾಗೂ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಕಳೆದ ನವೆಂಬರ್ 27ರಂದು ಸೋದರಿಯರನ್ನು ಕೊಲ್ಹಾಪುರದ ಅಣ್ಣ- ತಮ್ಮಂದಿರಿಗೆ ಮದುವೆ ಮಾಡಿಕೊಡಲಾಗಿತ್ತು. ಮೊದಲ ರಾತ್ರಿಯಂದು ಇಬ್ಬರ ಹಾಸಿಗೆಯ ಮೇಲೆಯೂ ಬಿಳಿಯ ಬಣ್ಣದ ಬೆಡ್ಶೀಟ್ ಹಾಕಲಾಗಿತ್ತು. ಪತಿ-ಪತ್ನಿ ದೈಹಿಕ ಕ್ರಿಯೆ ನಡೆಸಿದಾಗ ಸಾಮಾನ್ಯವಾಗಿ ಯುವತಿಯರ ಕನ್ಯಾಪೊರೆ ಹರಿಯುವ ಕಾರಣ ರಕ್ತ ಬರುತ್ತದೆ. ಆದರೆ ಇದು ಎಲ್ಲಾ ಸಮಯದಲ್ಲಿಯೂ ಆಗಬೇಕೆಂದೇನಿಲ್ಲ. ಕ್ರೀಡಾಪಟುಗಳು ಸೇರಿದಂತೆ ದೇಹಕ್ಕೆ ಶ್ರಮ ಕೊಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸ್ತ್ರೀಯರಿಗೆ ಕನ್ಯಾಪೊರೆ ಮೊದಲೇ ಸಹಜವಾಗಿ ಹರಿಯುವ ಕಾರಣ, ಮೊದಲ ರಾತ್ರಿ ರಕ್ತ ಕಾಣಿಸಿಕೊಳ್ಳುವುದಿಲ್ಲ.
ಆದರೆ ಮೊದಲ ರಾತ್ರಿ ಯುವತಿಯ ಕನ್ಯಾಪೊರೆ ಹರಿದರೆ ಮಾತ್ರ ಆಕೆ ಪವಿತ್ರಳು ಎಂದು ನಂಬಿದ್ದಾರೆ ಈ ಗಂಡಿನ ಮನೆಯವರು. ಅಕ್ಕನ ಬೆಡ್ಷೀಟ್ ಮೇಲೆ ರಕ್ತದ ಕಲೆ ಕಾಣಿಸಿಕೊಳ್ಳಲಿಲ್ಲ, ಆದರೆ ತಂಗಿಗೆ ಕಾಣಿಸಿಕೊಂಡಿದೆ. ಅಕ್ಕನಿಗೆ ರಕ್ತ ಬರಲಿಲ್ಲ ಎನ್ನುವ ಕಾರಣಕ್ಕೆ ಗಂಡನಿಗೆ ಸಿಟ್ಟುಬಂದು ಆಕೆ ನಡತೆಗೆಟ್ಟವಳು ಎಂದು ಬಿರುದು ಕೊಟ್ಟುಬಿಟ್ಟ. ಮಾರನೆಯ ದಿನ ಆತನ ಕುಟುಂಬಸ್ಥರು ಹಿಗ್ಗಾಮುಗ್ಗ ಆಕೆಯನ್ನು ಥಳಿಸಿದ್ದಾರೆ. ಅಕ್ಕ ನಡತೆಗೆಟ್ಟವಳಾದ ಮೇಲೆ ತಂಗಿಯೂ ತಮಗೆ ಬೇಡ ಎಂದು ಇಬ್ಬರನ್ನೂ ಹೊರಕ್ಕೆ ದಬ್ಬಿದ್ದಾರೆ.
ಜತೆಗೆ ಸಹೋದರಿಯರ ತವರು ಮನೆಯಿಂದ 10 ಲಕ್ಷ ರೂಪಾಯಿ ಪರಿಹಾರದ ಬೇಡಿಕೆ ಇಟ್ಟಿದ್ದಾರೆ! ತಮಗೆ ನ್ಯಾಯ ಕೊಡಿಸಿ ಎಂದು ಯುವತಿಯ ಮನೆಯವರು ಪಂಚಾಯಿತಿಯವರನ್ನು ಕೋರಿಕೊಂಡರೆ ಅವರು ಸಹೋದರಿಯರ ಪಾಲಕರಿಂದ 40 ಸಾವಿರ ರೂಪಾಯಿ ವಸೂಲಿ ಮಾಡಿದ್ದೂ ಅಲ್ಲದೇ ಡಿವೋರ್ಸ್ ಕೂಡ ಕೊಡಿಸಿಬಿಟ್ಟಿದ್ದಾರೆ! 10 ಲಕ್ಷ ರೂಪಾಯಿಗಾಗಿ ಹಿಂಸೆ ಕೊಡುತ್ತಿರುವ ಕಾರಣ, ಯುವತಿಯ ಮನೆಯವರು ಇದೀಗ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದು ಪ್ರಕರಣ ಬೆಳಕಿಗೆ ಬಂದಿದೆ.