ಕಷ್ಟಪಟ್ಟು ಸ್ಮಾರ್ಟ್​​ಫೋನ್​ ಎಗರಿಸಿದ ಕಳ್ಳ ವಾಪಸ್​ ಕೊಟ್ಟುಬಿಟ್ಟ- ಕಾರಣ ಕೇಳಿ ಪತ್ರಕರ್ತ ಸುಸ್ತಾದ!

theif
Published on

ನೋಯ್ಡಾ (ಉತ್ತರ ಪ್ರದೇಶ): ಒಮ್ಮೊಮ್ಮೆ ಏನೇನೋ ವಿಚಿತ್ರ ಘಟನೆಗಳು ನಡೆಯುತ್ತವೆ. ಯಾರೂ ಊಹಿಸಲಾಗದ, ಸುಲಭದಲ್ಲಿ ನಂಬಲೂ ಸಾಧ್ಯವಾಗದಂಥ ಘಟನೆಗಳು ಜರುಗುತ್ತವೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಅದೂ ಕಳ್ಳನೊಬ್ಬನ ವಿಚಿತ್ರ ಘಟನೆ ಇದು.

ಸಾಮಾನ್ಯವಾಗಿ ನಮ್ಮಲ್ಲಿರುವ ಯಾವುದಾದರೂ ವಸ್ತು ಚೆನ್ನಾಗಿ ಇಲ್ಲದಿದ್ದರೆ, ಅಗ್ಗದ್ದಾಗಿದ್ದರೆ ಅಥವಾ ಹಾಳಾಗಿ ಹೋಗಿದ್ದರೆ ಇದನ್ನೇದಾದರೂ ಕಳ್ಳ ಎತ್ತಾಕಿಕೊಂಡು ಹೋದರೆ ಇದರ ಸ್ಥಿತಿ ನೋಡಿ ವಾಪಸ್​ ಕೊಟ್ಟು ಹೋಗುತ್ತಾನೆ ಎಂದೋ ಇಲ್ಲವೇ ಇದನ್ನು ನೋಡಿದ ಕಳ್ಳ ಅಯ್ಯೋ ಪಾಪ ಎಂದು ಹೊಸದನ್ನು ತಂದುಕೊಡುತ್ತಾನೆ ಎಂದು ಮಾತನಾಡಿಕೊಳ್ಳುವುದು ಸಾಮಾನ್ಯ. ಅಂಥದ್ದೇ ಒಂದು ಘಟನೆ ಆದರೆ ಸ್ವಲ್ಪ ಡಿಫರೆಂಟ್​ ಆಗಿರುವ ಘಟನೆ ಇದು.

ಹಿರಿಯ ವರದಿಗಾರರಾದ ದೆಬಾಯನ್​ ರಾಯ್​ ಎಂಬುವವರ ಸ್ಮಾರ್ಟ್​ಫೋನ್​ನ ಕಳ್ಳತನದ ಘಟನೆ ಇದಾಗಿದೆ. 52 ಮೆಟ್ರೋ ನಿಲ್ದಾಣದಲ್ಲಿ ರೆಬಾಯನ್​ ಅವರು ನಿಂತುಕೊಂಡಿದ್ದ ಸಂದರ್ಭದಲ್ಲಿ ಕಪ್ಪು ಬಣ್ಣದ ಮಾಸ್ಕ್​ ಹಾಕಿಕೊಂಡು ಬಂದ ವ್ಯಕ್ತಿ ಅವರ ಕೈಲಿದ್ದ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​ 10 ಪ್ಲಸ್​​ನ್ನು ಎಗರಿಸಿಕೊಂಡು ಹೋಗಿಬಿಟ್ಟಿದ್ದಾನೆ! ಅಯ್ಯೋ ನನ್ನ ಫೋನು ಎಂದು ರೆಬಾಯನ್​ ಅವರು ಕೂಗುವ ಮೊದಲೇ ಆ ಕಳ್ಳ ಅದನ್ನು ವಾಪಸ್​ ಕೊಟ್ಟುಬಿಟ್ಟಿದ್ದಾನೆ!

ಅಷ್ಟಕ್ಕೂ ಅದೇನು ಕೆಟ್ಟುಹೋದ, ಒಡೆದುಹೋದ ಫೋನೂ ಆಗಿರಲಿಲ್ಲ, ತೀರಾ ಹಳೆಯದ್ದೂ ಆಗಿರಲಿಲ್ಲ. ಉತ್ತಮ ಬೆಲೆಬಾಳುವ ಒಳ್ಳೆಯ ಫೋನೇ ಆಗಿತ್ತು. ಇಷ್ಟಿದ್ದ ಮೇಲೂ ಆ ಕಳ್ಳ ಏಕೆ ಅದನ್ನು ವಾಪಸ್​ ಕೊಟ್ಟ ಎಂದು ಕೇಳಿ, ಆ ಪತ್ರಕರ್ತನಿಗೆ ತಮ್ಮ ಕಣ್ಣು-ಕಿವಿಗಳನ್ನೇ ನಂಬಲಾಗಲಿಲ್ಲವಂತೆ.

ಅಷ್ಟಕ್ಕೂ ಆ ಕಳ್ಳನಿಗೆ ಏಕೆ ವಾಪಸ್​ ಕೊಟ್ಟೆ ಎಂದು ಕೇಳುವ ಮೊದಲೇ ಇವರ ಮುಖವನ್ನು ನೋಡಿದ ಆ ಕಳ್ಳ... ಇದನ್ನು ನಾನು ಒನ್​ಪ್ಲಸ್​ 9 ಪ್ರೋ ಎಂದು ಭಾವಿಸಿ ಎಗರಿಸಿದ್ದೆ. ನನಗೆ ಅದೇ ಫೋನ್​ ಬೇಕಿತ್ತು. ಆದರೆ ಇದು ಅದಲ್ಲ ಬೇರೆ ಕಂಪೆನಿಯದ್ದು ಎಂದು ತಿಳಿಯಿತು. ಅದಕ್ಕೆ ವಾಪಸ್​ ಕೊಟ್ಟೆ. ಕ್ಷಮಿಸಿ' ಎಂದು ಹೇಳಿ ಅದೇ ವೇಗದಲ್ಲಿ ಪರಾರಿಯಾದನಂತೆ!

ಈ ಬಗ್ಗೆ ರಾಯ್​ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net