ಗಂಡ ಎಂದುಕೊಂಡು ಏಳು ತಿಂಗಳು ಸಂಸಾರ ಮಾಡಿದಳು: ಆಮೇಲೆ ಗೊತ್ತಾಯ್ತು ಜತೆಗಿದ್ದುದ್ದು ಹೆಣ್ಣೆಂದು!

couple
Published on

ಜೈಪುರ (ರಾಜಸ್ಥಾನ): ಈ ಶೀರ್ಷಿಕೆ ನೋಡಿದರೆ ಎಂಥವರಿಗೂ ಒಮ್ಮೆ ದಿಗಿಲಾಗುವುದು ಸರಿ, ಜತೆಗೆ ಇದು ಸಾಧ್ಯವೇ ಇಲ್ಲ, ಎಲ್ಲಾ ಸುಳ್ಳು ಸುದ್ದಿ ಎನ್ನುವವರೂ ಕಮ್ಮಿಯೇನಲ್ಲ. ಆದರೆ ಅಸಲಿಗೆ ಇದು ಸುಳ್ಳು ಸುದ್ದಿಯಲ್ಲ, ಬದಲಿಗೆ ನೈಜ ಘಟನೆಯೇ. ಮದುವೆಯಾದ ಮೇಲೆ ಏಳು ತಿಂಗಳು ಒಟ್ಟಿಗಿದ್ದ ಮಹಿಳೆಗೆ ತಾನು ಇಷ್ಟು ದಿನ ಗಂಡ ಎಂದುಕೊಂಡವ ಅಸಲಿಗೆ ಗಂಡಸೇ ಅಲ್ಲ, ಬದಲಿಗೆ ಹೆಣ್ಣು ಎಂದು ತಿಳಿದಿದೆ!

ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ರಾಜಸ್ಥಾನದ ಜೈಪುರದ ಕೋಟಾ ಎಂಬಲ್ಲಿ. ಕೆಲ ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ವೈರಲ್‌ ಆಗಿದೆ.

ಇದರಲ್ಲಿ 30 ವರ್ಷದ ಮಹಿಳೆ ಮೋಸ ಹೋದವಳು. ಆಗಿದ್ದೇನೆಂದರೆ ಈ ಮಹಿಳೆಯ ಗಂಡ ಮೃತಪಟ್ಟಿದ್ದ. ಅವಳಿಗೆ ಇಬ್ಬರು ಮಕ್ಕಳು. ಜೀವನಕ್ಕೆ ದಾರಿ ಹುಡುಕಿಕೊಂಡು ಮಹಿಳೆ ಇಲ್ಲಿಯ ನಾರಿಶಾಲಾ ಎಂಬ ಮಹಿಳಾ ಆಶ್ರಮದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಅಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು.

ಇದೇ ಆಶ್ರಮಯಕ್ಕೆ ವಿಜೇತಾ ಎಂಬಾಕೆ ತನ್ನ ಹೆಸರನ್ನು ವಿಕಾಸ್‌ ಎಂದು ಬದಲಿಸಿಕೊಂಡು ಆಶ್ರಮಕ್ಕೆ ಬಂದಿದ್ದಳು. ನೋಡಲು ಪುರುಷನಂತೆ ಇದ್ದದ್ದು ಮಾತ್ರವಲ್ಲದೇ ದನಿ ಕೂಡ ಗಂಡಸರಂತೆಯೇ ಇತ್ತು. ಆದರೆ ಅದು ಮಹಿಳಾ ಆಶ್ರಮ ಆಗಿದ್ದರಿಂದ ಇಲ್ಲಿಗೇಕೆ ಬಂದೆ ಎಂದು ಕೇಳಿದಾಗ ತನ್ನನ್ನು ಪೊಲೀಸರು ಮಹಿಳೆ ಎಂದು ತಪ್ಪಾಗಿ ಇಲ್ಲಿಗೆ ಕಳಿಸಿದ್ದಾರೆ, ನಾನು ಪುರುಷ. ಆದರೆ ನನಗೆ ತುರ್ತಾಗಿ ಕೆಲಸದ ಅಗತ್ಯವಿದೆ ಎಂದೆಲ್ಲಾ ಸಬೂಬು ಹೇಳಿ ಅಲ್ಲಿಯೇ ಉಳಿದುಕೊಂಡ ವಿಕಾಸ.

ನಂತರ ನಿಧಾನವಾಗಿ ಈ ಮಹಿಳೆಯ ಪರಿಚಯ ಮಾಡಿಕೊಂಡಳು. ಆಕೆ ವಿಧವೆ ಹಾಗೂ ತಕ್ಕಮಟ್ಟಿಗೆ ಸ್ಥಿತಿವಂತೆ, ಚಿನ್ನಾಭರಣಗಳೂ ಇವೆ ಎಂಬುದನ್ನು ಅರಿತುಕೊಂಡ ವಿಜೇತಾ, ಅವಳನ್ನು ಹೇಗಾದರೂ ಮೋಸ ಮಾಡಬಹುದು ಎಂದುಕೊಂಡಳು. ಮೊದಲೇ ತಾನು ಗಂಡಸು ಎಂದು ಹೇಳಿದ್ದರಿಂದ ಮಹಿಳೆಗೆ ಬಾಳು ಕೊಡುವುದಾಗಿ ಹೇಳಿದಳು. ತನಗೂ ಗಂಡಿನ ಅಗತ್ಯವಿದ್ದುದರಿಂದ ಮಹಿಳೆ ಒಪ್ಪಿಕೊಂಡಳು.

ಹೀಗೆ ಇಬ್ಬರ ಮದುವೆ ನಡೆಯಿತು. ನಂತರ ಏಳು ತಿಂಗಳು ಪತಿ-ಪತ್ನಿಯಂತೆ ಒಟ್ಟಿಗೇ ಇದ್ದರು. ದೈಹಿಕ ಸಂಪರ್ಕ ನಡೆದಾಗಲೂ ತಿಳಿಯಲಿಲ್ಲವೇ ಎಂದು ಪ್ರಶ್ನಿಸಬಹುದು. ಆದರೆ ಅಸಲಿಯತ್ತು ಏನೆಂದರೆ, ಈ ವಿಜೇತಾ ತನ್ನ ಹೆಣ್ತತನ ಗುಟ್ಟನ್ನು ಮರೆಮಾಚಲು ಒಂದು ಕಥೆ ಹೆಣೆದಿದ್ದಳು. ಅದೇನೆಂದರೆ ತನ್ನನ್ನು ಬೆತ್ತಲೆಯಾಗಿ ನೋಡಿದವರು ಸತ್ತು ಹೋಗುತ್ತಾರೆ ಎಂದು ಮಂತ್ರವಾದಿಯೊಬ್ಬ ಹೇಳಿದ್ದಾನೆ, ಆದ್ದರಿಂದ ನಾನು ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದಿದ್ದಳು. ಇದರಿಂದ ಹೆದರಿ ಮಹಿಳೆ ಕೂಡ ಒಪ್ಪಿಕೊಂಡಿದ್ದಳು.

ಏಳು ತಿಂಗಳ ನಂತರ ಅದೊಂದು ದಿನ ಮಹಿಳೆಯ ಬಳಿ ಇದ್ದ ಸುಮಾರು 1.5 ಲಕ್ಷ ರೂ ನಗದು ಹಾಗೂ ಸುಮಾರು 3 ಲಕ್ಷ ರೂಪಾಯಿಯ ಚಿನ್ನದ ಒಡವೆ ದೋಚಿ ಪರಾರಿಯಾದಳು. ನಂತರ ತನ್ನ ಗಂಡ ಚಿನ್ನಾಭರಣಗಳ ಜತೆ ಪರಾರಿಯಾಗಿರುವ ವಿಷಯ ತಿಳಿದು ಮಹಿಳೆ ಪೊಲೀಸರಲ್ಲಿ ದೂರು ದಾಖಲಿಸಿದಳು.

ನಂತರ ಪೊಲೀಸರು ಆಕೆಯನ್ನು ಹಿಡಿದಾಗ ಅವರಿಗೆ ಅನುಮಾನ ಬಂದಿದೆ. ನಂತರ ತಮ್ಮದೇ ಆದ ರೀತಿಯಲ್ಲಿ ಅವರು ತನಿಖೆ ಮಾಡಿದಾಗ ಆಕೆ ಅವನಲ್ಲ ಅವಳು ಎಂದು ತಿಳಿದಿದೆ! ಅಚ್ಚರಿಯ ವಿಷಯ ಎಂದರೆ ಪೊಲೀಸರು ತಿಳಿಸಿದ ಮೇಲಷ್ಟೇ ಮಹಿಳೆಗೆ ತಾನು ಇಷ್ಟು ವರ್ಷ ಗಂಡ ಎಂದುಕೊಂಡವ ಹೆಣ್ಣು ಎಂದು ತಿಳಿದಿದೆ! ಇದೇ ರೀತಿ ಮೋಸ ಮಾಡುವವರೂ ಇರುತ್ತಾರೆ ಎಚ್ಚರಿಕೆ ಎಂದಿದ್ದಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net