

ನವದೆಹಲಿ: ರಷ್ಯಾ ಯೂಕ್ರೇನ್ ಮೇಲೆ ಸಮರ ಸಾರಿದ ಬೆನ್ನಲ್ಲೇ ಅಲ್ಲಿ ಸಿಲುಕಿರುವ ಭಾರತೀಯರು ಅದರಲ್ಲಿಯೂ ಹೆಚ್ಚಾಗಿ ವಿದ್ಯಾರ್ಥಿಗಳ ಚರ್ಚೆಯಾಗುತ್ತಿದೆ. ಯೂಕ್ರೇನ್ನಲ್ಲಿ 20 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇದ್ದರೆ, ಕರ್ನಾಟಕ ಒಂದರಿಂದಲೇ 100ಕ್ಕೂ ಅಧಿಕ ವಿದ್ಯಾರ್ಥಿಗಳು ಯೂಕ್ರೇನ್ನಲ್ಲಿ ಸಿಲುಕಿದ್ದು ಆತಂಕ ಸೃಷ್ಟಿಯಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳು ಯೂಕ್ರೇನ್ಗೆ ಹೋಗಿದ್ದು, ವೈದ್ಯಕೀಯ ಓದಲು.
ಹಾಗಿದ್ದರೆ ಭಾರತದಲ್ಲಿ ಸಿಗದಷ್ಟು ಉತ್ತಮ ಶಿಕ್ಷಣ ರಷ್ಯಾ, ಯೂಕ್ರೇನ್ನಲ್ಲಿ ಇದೆಯಾ? ಅಥವಾ ಇನ್ನಾವ ಕಾರಣಕ್ಕೆ ವಿದ್ಯಾರ್ಥಿಗಳು ಎಂಬಿಬಿಎಸ್ ಕಲಿಯಲು ಅಲ್ಲಿಗೆ ಹೋಗುತ್ತಾರೆ ಎಂಬ ಪ್ರಶ್ನೆ ಬರುವುದು ಸಹಜ. ಭಾರತದ ಮಾತ್ರವಲ್ಲದೇ ಬೇರೆ ಬೇರೆ ದೇಶದವರು ಕೂಡ ಯೂಕ್ರೇನ್ ಮತ್ತು ರಷ್ಯಕ್ಕೇ ವೈದ್ಯಕೀಯ ಶಿಕ್ಷಣ ಕಲಿಯಲು ಹೋಗುತ್ತಾರೆ. ಅದ್ಯಾಕೆ ಅಂತೀರಾ?
ಭಾರತದ ಮಟ್ಟಿಗೆ ಹೇಳುವುದಾದರೆ, ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕವರು ವೈದ್ಯಕೀಯ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು. ಆದರೆ ಎಲ್ಲರಿಗೂ ಈ ಅದೃಷ್ಟ ಇರುವುದಿಲ್ಲವಲ್ಲ. ವೈದ್ಯರಾಗುವ ಕನಸು ಕಾಣುವವರು ಹಲವರು. ಆದರೆ ಸರ್ಕಾರಿ ಕೋಟಾದಡಿ ಸೀಟು ಸಿಗುವುದು ಕೆಲವರಿಗೆ ಮಾತ್ರ. ಉಳಿದವರು ಖಾಸಗಿ ಸೀಟುಗಳಲ್ಲಿ ಪ್ರವೇಶ ಪಡೆಯಬೇಕು. ಆದರೆ ಎಲ್ಲರಿಗೂ ತಿಳಿದಿರುವಂತೆ ಖಾಸಗಿ ಸೀಟುಗಳು ಎಂದರೆ ಅದು ಸಾಧ್ಯವಾಗುವುದು ಕೋಟ್ಯಧೀಶ್ವರರಿಗೆ ಮಾತ್ರ. ಅಷ್ಟು ದುಬಾರಿ ಶಿಕ್ಷಣ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವೈದ್ಯಕೀಯ ಶಿಕ್ಷಣ.
ಇದೇ ಕಾರಣಕ್ಕೆ ಭಾವಿ ವೈದ್ಯರ ಕಣ್ಣು ಹೋಗುವುದು ರಷ್ಯಾ ಮತ್ತು ಯೂಕ್ರೇನ್ನತ್ತ. ಏಕೆಂದರೆ ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಬಹಳ ಕಡಿಮೆ. ಅದು ಎಷ್ಟು ಎಂದರೆ ಭಾರತಕ್ಕಿಂತ ಶೇ.60 ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಅಲ್ಲಿ ಶುಲ್ಕವಿರುತ್ತದೆ. ಇವಿಷ್ಟೇ ಅಲ್ಲದೇ, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ ಯೂಕ್ರೇನ್ ಕರೆದು ತುಂಬಾ ಕಡಿಮೆ ದರದಲ್ಲಿ ಸೀಟು ನೀಡುತ್ತದೆ.ಕೆಲವೊಂದು ಕಾಲೇಜುಗಳಲ್ಲಿ ನೀಟ್ ಪರೀಕ್ಷೆಯ ಅಗತ್ಯವೂ ಇರುವುದಿಲ್ಲ!
ಇನ್ನು ವಿದ್ಯಾರ್ಥಿಗಳ ಜೀವನ ನಿರ್ವಹಣೆ ಕುರಿತು ಹೇಳುವುದಾದರೆ, ಭಾರತಕ್ಕೆ ಹೋಲಿಸಿದರೆ ಯೂಕ್ರೇನ್ನಲ್ಲಿ ಜೀವನ ನಿರ್ವಹಣೆ ವೆಚ್ಚವೂ ತೀರಾ ಕಡಿಮೆ. ಇದರ ಜೊತೆಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಯುನೆಸ್ಕೋ, ಯುರೋಪಿಯನ್ ದೇಶಗಳ ಮಾನ್ಯತೆ ಇದೆ.