

ನವದೆಹಲಿ: ಕೆಲ ದಿನಗಳಿಂದ ವಾಟ್ಸ್‌ಆ್ಯಪ್ ಮತ್ತು ಟ್ವಿಟರ್‌ಗಳ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇನ್ನುಮುಂದೆ ಇವುಗಳನ್ನು ಬಳಕೆ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಅದೇನೋ ಹೊಸ ರೂಲ್ಸ್ ಮಾಡಿದ್ದು, ವಾಟ್ಸ್‌ಆ್ಯಪ್ ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಮೂಲ ಗೊತ್ತಿಲ್ಲದವರು ನಾನು ವಾಟ್ಸ್‌ಆ್ಯಪ್ ಜತೆಗಿದ್ದೇನೆ, ನಾನು ಟ್ವಿಟರ್ ಜತೆಗಿದ್ದೇನೆ ಎನ್ನುವ ಹ್ಯಾಷ್‌ಟ್ಯಾಗ್ ಮೂಲಕ ಅದನ್ನು ಸಪೋರ್ಟ್ ಮಾಡುತ್ತಿದ್ದಾರೆ. ಜತೆಗೆ ಇನ್ಮುಂದೆ ಇವು ಬಳಕೆಗೆ ಇರುವುದಿಲ್ಲ ಎಂದೂ ಸುದ್ದಿಗಳು ಹರಿದಾಡುತ್ತಿವೆ.
ಈ ಕುರಿತು ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕೇಂದ್ರದ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಫೇಸ್‌ಬುಕ್ ಸಂಸ್ಥೆ ಹೋಗಿದೆ ನಿಜ. ಆದರೆ ಇದರಿಂದಾಗಿ ವಾಟ್ಸ್‌ಆ್ಯಪ್ ಬಳಕೆದಾರರು ಹೆದರು ಅಗತ್ಯವಿಲ್ಲ. ನಿಯಮಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅಪರಾಧಗಳಿಗೆ ಸಂಬಂಧಿಸಿದ ಸಂದೇಶವನ್ನು ಯಾರು ಮೊದಲು ಹಂಚಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ಇದರ ಹಿಂದಿನ ಉದ್ದೇಶವಾಗಿದೆ ಅಷ್ಟೇ. ವಿನಾಕಾರಣ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದಿದ್ದಾರೆ.
ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಹೊಸ ನಿಯಮವಿದೆ. ಸಾರ್ವಜನಿಕ ಸುವ್ಯವಸ್ಥೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದ ಸಂದೇಶಗಳ ಮೂಲವನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಈ ಹೊಸ ಐಟಿ ನಿಯಮಗಳು ರೂಪಿಸಲಾಗಿದೆ. ಇದನ್ನು ಪತ್ತೆ ಹಚ್ಚಲು ಫೇಸ್‌ಬುಕ್ ಸಂಸ್ಥೆಯಿಂದ ಮಾತ್ರ ಸಾಧ್ಯ. ಆದರೆ ಅದನ್ನು ಒಪ್ಪದ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಜನಸಾಮಾನ್ಯರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ನಿರಾತಂಕವಾಗಿ ಬಳಕೆಯನ್ನು ಮುಂದುವರೆಸಬಹುದು ಎಂದಿದ್ದಾರೆ. ಷರತ್ತನ್ನು ಒಪ್ಪಿಕೊಳ್ಳಲು ಮೇ 26ರ ಗಡುವು ನೀಡಲಾಗಿತ್ತು. ಆದರೆ ಅದು ಮುಗಿದುಹೋಗಿದ್ದು, ಇದೀಗ ಫೇಸ್‌ಬುಕ್ ಕೋರ್ಟ್ ಮೆಟ್ಟಿಲೇರಿದೆ. ಹಾಗೆಂದು ಬಳಕೆದಾರರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.