ಪೋಷಕರು ಬದುಕಿರಲಿ, ಇಲ್ಲದಿರಲಿ... ಸಾಕು ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ- ಕಾನೂನು ಏನಿದೆ ನೋಡಿ...

nyayadevate
Published on
ನನ್ನ ಹೆಂಡತಿ ಸಾಕು ಮಗಳು. ಅವರು ತುಂಬಾ ಸಿರಿವಂತರು. ಈಗ ಐದು ವರ್ಷಗಳಿಂದ ನಮಗೆ ಆಸ್ತಿ ಕೊಡಿ ಎಂದು ಕೇಳಿದ್ದಕ್ಕೆ ಕೋಪ ಮಾಡಿಕೊಂಡು ನಮ್ಮನ್ನು ದೂರ ಇಟ್ಟಿದ್ದಾರೆ. ಆಸ್ತಿಯನ್ನೆಲ್ಲಾ ನನ್ನ ಹೆಂಡತಿಯ ಸಾಕು ತಂದೆಯ ತಮ್ಮನ , ಮತ್ತು ಅಣ್ಣನ ಮಕ್ಕಳು ಅವರನ್ನು ನಂಬಿಸಿ ಮೋಸ ಮಾಡಿ ವಿಲ್ ಮತ್ತು ದಾನ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ತಿಳಿಯಿತು. ಈಗ ನನ್ನ ಹೆಂಡತಿ ಕೇಸು ಹಾಕಿ ಇಂಜಕ್ಷನ್ ಪಡೆಯಬಹುದೇ? ನನ್ನ ಹೆಂಡತಿಗೇ ಎಲ್ಲ ಆಸ್ತಿ ಸೇರಬೇಕೆಂದು ಆದೇಶ ಪಡೆಯಬಹುದೇ? ನಾವು ಬೇಕಿದ್ದರೆ ನನ್ನ ಹೆಂಡತಿಯ ತಂದೆ ತಾಯಿಯನ್ನು ಸಾಕಿ ಸಲಹಿ ಪೋಷಣೆ ಮಾಡುತ್ತೇವೆ. ಈಗ ಆಸ್ತಿಗೋಸ್ಕರ ನಾವು ಏನು ಮಾಡಬೇಕೆಂದು ತಿಳಿಸಿ.

ಉತ್ತರ: ಸಾಕು ಮಗಳಿಗೆ ಅಥವಾ ಸಾಕು ಮಗನಿಗೆ ತಂದೆ ತಾಯಿಯ ಆಸ್ತಿಯಲ್ಲಿ ತಂದೆ ತಾಯಿ ಬದುಕಿರುವಾಗ ಅಥವಾ ತಂದೆ ತಾಯಿ ತೀರಿಕೊಂಡಾಗ ಯಾವ ಹಕ್ಕೂ ಇರುವುದಿಲ್ಲ. ದತ್ತು ಪುತ್ರಿ ಅಥವಾ ದತ್ತು ಪುತ್ರನಾಗಿದ್ದರೆ ಕಾನೂನು ಬೇರೆ.

ನಿಮ್ಮ ಪತ್ನಿಗೆ ಯಾವುದೇ ರೀತಿಯಲ್ಲೂ ಆಕೆಯ ಸಾಕು ತಂದೆ ತಾಯಿಯ ಆಸ್ತಿಯಲ್ಲಿ ಯಾವುದೇ ಹಕ್ಕೂ ಬರುವುದಿಲ್ಲ. ನಿಮ್ಮ ಪತ್ನಿಯ ಸಾಕು ತಂದೆ ತಾಯಿ ತೀರಿಕೊಂಡ ಮೇಲೂ ನಿಮ್ಮ ಪತ್ನಿಗೆ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ. ಒಂದು ವೇಳೆ ವಿಲ್ ಅಥವಾ ದಾನ ಪತ್ರ ಸಕ್ರಮವಾಗಿಲ್ಲ ಎಂದು ನ್ಯಾಯಾಲಯದಲ್ಲಿ ತೀರ್ಮಾನ ಆದರೂ , ಆಗಲೂ ನಿಮ್ಮ ಪತ್ನಿ ಸಾಕು ಮಗಳಾಗಿರುವುದರಿಂದ ಆಕೆಗೆ ಹಕ್ಕು ಬರುವುದಿಲ್ಲ.

ನಿಮ್ಮ ಪತ್ನಿಯ ಸಾಕು ತಂದೆ ತಾಯಿಗಳ ಸಂಬಂಧಿಗಳಿಗೆ, ಹಿಂದೂ ವಾರಸಾ ಕಾಯ್ದೆಯಂತೆ ಆಸ್ತಿ ಹಂಚಿಕೆ ಆಗುತ್ತದೆ. ನೀವು ನಿಮ್ಮ ಪತ್ನಿಯ ಸಾಕು ತಂದೆ ತಾಯಿಯರನ್ನು ಪೋಷಣೆ ಮಾಡಿದರೂ ಮಾಡದೇ ಇದ್ದರೂ ನಿಮ್ಮ ಪತ್ನಿಗೆ ಅವರ ಆಸ್ತಿಯಲ್ಲಿ ಭಾಗ ಬರುವುದಿಲ್ಲ. ತಾವು ಆಸ್ತಿ ಕೇಳಿ ವಿಶ್ವಾಸ ಕಳೆದುಕೊಂಡಿದ್ದೀರಿ. ಈಗಲೂ ಅವರ ಪ್ರೀತಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅವರೇ ಮನಸ್ಸು ಬದಲಾಯಿಸಿ ಏನಾದರೂ ಕೊಟ್ಟರೆ ಅದು ನಿಮ್ಮ ಅದೃಷ್ಟ. ಕೇಸು ಹಾಕಿ ಪ್ರಯೋಜನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net