

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭರ್ಜರಿ ಮುನ್ನಡೆಯತ್ತ ಸಾಗಿದೆ.; 292 ಸ್ಥಾನಗಳ ಪೈಕಿ 187 ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅದರ ಬದ್ಧ ವೈರಿ ಎನಿಸಿರುವ ಬಿಜೆಪಿ 85 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಈ ಬಾರಿಯೂ ತಮ್ಮದೇ ಪಕ್ಷ ಅಧಿಕಾರಕ್ಕೆ ಬದಲಿದೆ ಎಂದು ಟಿಎಂಸಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದರೆ, ತಮ್ಮ ಪಕ್ಷ ಮುಂದೆ ಸಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೂ ಹರ್ಷಿಸಿದ್ದಾರೆ. ಅದರೆ ಅವರ ಈ ಹರ್ಷ ಹೆಚ್ಚು ಹೊತ್ತು ಇರಲಾಗುತ್ತಿಲ್ಲ. ಏಕೆಂದರೆ ಖುದ್ದು ಇವರ ಖುರ್ಚಿ ಅಲ್ಲಾಡುವ ಹಂತಕ್ಕೆ ಬಂದಿದೆ.
ಬಲು ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ನಂದಿಗ್ರಾಮದಿಂದ ಮಮತಾ ಕಣಕ್ಕಿಳಿದಿದ್ದು, ಇವರ ಪ್ರತಿಸ್ಪರ್ಧಿಯಾಗಿ, ಇವರದ್ದೇ ಸಂಪುಟದಲ್ಲಿದ್ದ ಇದೀಗ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗಿನ ಎಣಿಕೆಯಲ್ಲಿ ಸುವೆಂದು ಅಧಿಕಾರಿಯವರು ಮಮತಾ ಅವರಿಗಿಂತ ಸುಮಾರು ಎಂಟು ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆದರೆ ಕ್ಷಣಕ್ಷಣಕ್ಕೂ ನಂದಿಗ್ರಾಮ ಕುತೂಹಲದ ಕೇಂದ್ರವಾಗಿ ಪರಿಣಮಿಸಿದೆ. ಒಟ್ಟೂ ಎಂಟು ಹಂತಗಳಲ್ಲಿ ಇಲ್ಲಿ ಮತದಾನವಾಗಿದ್ದು, ಇನ್ನೂ ಅನೇಕ ಸುತ್ತುಗಳು ಬಾಕಿ ಇವೆ. ಆದ್ದರಿಂದ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆ ಇದೆ.