14ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಮಾಣ ವಚನ ಸ್ವೀಕಾರ

dhankar
Published on

ನವದೆಹಲಿ: ಎನ್​ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್ ಧನ್ಕರ್ 14ನೇ ಉಪ ರಾಷ್ಟ್ರಪತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನ್ಕರ್​ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಇದೇ 6ರಂದು ನಡೆದಿದ್ದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮೂಲದ ಧನ್ಕರ್ ಅವರು, ತಮ್ಮ ಪ್ರತಿಸ್ಪರ್ಧಿ, ಯುಪಿಎ ಬೆಂಬಲಿತ ಮಾರ್ಗರೆಟ್ ಆಳ್ವಾ ಅವರನ್ನು ಸೋಲಿಸಿ 346 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಚಲಾವಣೆ ಆಗಿರುವ ಒಟ್ಟು ಮತಗಳ ಪೈಕಿ ಧನ್ಕರ್​ ಅವರಿಗೆ 528 ಮತಗಳು ಹಾಗೂ ಮಾರ್ಗರೆಟ್​​ಗೆ 182 ಮತಗಳು ಚಲಾವಣೆ ಆಗಿದ್ದವು. 15 ಮತಗಳು ಅಸಿಂಧುವಾಗಿವೆ.

ಜಗದೀಪ್ ಹಿನ್ನೆಲೆ: ಜಗದೀಪ್ ಧನ್ಕರ್ (71) ರಾಜಸ್ಥಾನ ಮೂಲದವರು. 1951ರ ಮೇ 18ರಂದು ಕಿಥನಾ ಗ್ರಾಮದಲ್ಲಿ ಜನಿಸಿದ ಧನ್ಕರ್ ಚಿತ್ತೋರಗಢದ ಸೈನಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರೈಸಿ, ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ವಕೀಲಿ ವೃತ್ತಿ ಮಾಡುತ್ತಿದ್ದ ಅವರು, ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್​ನ ಅಧ್ಯಕ್ಷರೂ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಪ್ರವೇಶ ಪಡೆದ ಧನ್ಕರ್, ಝುುಂಝುುನು ಕ್ಷೇತ್ರದಿಂದ 9ನೇ ಲೋಕಸಭೆಗೆ (1989-91) ಆಯ್ಕೆ ಆಗಿದ್ದರು. 1993-98ರ ಅವಧಿಯಲ್ಲಿ ರಾಜಸ್ಥಾನದ 10ನೇ ವಿಧಾನಸಭೆಗೆ ಕಿಷನ್​ಗಢದಿಂದ ಚುನಾಯಿತರಾಗಿದ್ದರು.

ನಂತರದಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡ ಅವರನ್ನು 2019ರ ಜುಲೈ 30ರಂದು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಧನ್ಕರ್ ನಡುವೆ ಆರಂಭದಿಂದಲೂ ಜಟಾಪಟಿ ಇದೆ. ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಮಮತಾ ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ರಾಜ್ಯಪಾಲರು ಪದನಿಮಿತ್ತವಾಗಿ ರಾಜ್ಯದ ಎಲ್ಲ ವಿವಿಗಳ ಕುಲಾಧಿಪತಿಗಳೂ ಆಗಿರುತ್ತಾರೆ. ಆದರೆ, ಇತ್ತೀಚೆಗೆ ಈ ಅಧಿಕಾರವನ್ನು ಕಿತ್ತುಕೊಂಡು, ಮುಖ್ಯಮಂತ್ರಿಯೇ ಎಲ್ಲ ವಿವಿಗಳ ಕುಲಾಧಿಪತಿ ಎಂಬ ತಿದ್ದುಪಡಿ ಮಸೂದೆಗೆ ಟಿಎಂಸಿ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net