ಚಾಕು ಹಿಡಿದು ಮಾಜಿ ಸಿಎಂನತ್ತ ಧಾವಿಸಿದ ಯುವಕ- ಕಾಂಗ್ರೆಸ್‌ ಬಾವುಟ ಹಿಡಿದವ ಅವರನ್ನೇ ಕೊಲ್ಲುವುದಾಗಿ ಬೆದರಿಸಿದ್ದೇಕೆ?

knife
Published on

ಡೆಹ್ರಾಡೂನ್: ಕಾಂಗ್ರೆಸ್‌ ಸಮಾವೇಶವೊಂದರಲ್ಲಿ ಯುವಕನೊಬ್ಬ ಚಾಕು ಹಿಡಿದು ಮಾಜಿ ಮುಖ್ಯಮಂತ್ರಿಯತ್ತ ಧಾವಿಸಿದ ಆತಂಕಕಾರಿ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಉಸ್ತುವಾರಿ ಹರೀಶ್ ರಾವತ್ ಅವರತ್ತ ಯುವಕ ಚಾಕು ಹಿಡಿದು ಧಾವಿಸಿದ್ದರೂ, ರಾವತ್‌ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಇದರ ಅರಿವೇ ಇಲ್ಲದಿರುವುದು ಭಾರಿ ಟೀಕೆ ಹಾಗೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಹರೀಶ್ ರಾವತ್ ಕಾಂಗ್ರೆಸ್ ಸದಸ್ಯತ್ವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾತು ಮುಗಿದ ಬಳಿಕ ವೇದಿಕೆಯಿಂದ ಕೆಳಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿಯೇ ಯುವಕನೊಬ್ಬ ಚಾಕು ಹಿಡಿದು ಏಕಾಏಕಿ ಸ್ಟೇಜ್‌ ಏರಿದ್ದಾನೆ. ತನ್ನ ಬಳಿ ಇದ್ದ ಚಾಕು ತೋರಿಸುತ್ತಾ ಅಲ್ಲಿರುವ ಮೈಕ್ ತೆಗೆದುಕೊಂಡಿದ್ದಾನೆ. ಅದರಲ್ಲಿ ಜೋರಾಗಿ ಕಿರುಚಾಡುತ್ತಾ ಸಭೆಯಲ್ಲಿ ನೆರೆದಿದ್ದವರೆಲ್ಲರೂ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹೇಳಿದ್ದಾನೆ.

ಹೀಗೆ ಕೂಗದಿದ್ದರೆ ಅಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಜನರು ಹೆದರಿ ಜೈ ಶ್ರೀರಾಮ್‌ ಎಂದಿದ್ದಾರೆ. ಕೊನೆಗೆ ಅಲ್ಲಿದ್ದವರು ಹರಸಾಹಸಪಟ್ಟು ಯುವಕನನ್ನು ಹಿಡಿದು ಆತನ ಕೈಯಿಂದ ಚಾಕು ಕಿತ್ತುಕೊಂಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಇದೀಗ ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿಜಕ್ಕೂ ಈತ ಯಾರು? ಜೈಶ್ರೀರಾಮ್‌ ಎನ್ನುವ ಘೋಷಣೆ ಕೂಗುವಂತೆ ಮಾಡಿದ ಈ ವ್ಯಕ್ತಿಯನ್ನು ನಿಜಕ್ಕೂ ಇಲ್ಲಿ ಕಳುಹಿಸಿದವರು ಯಾರು? ಇದರ ಹಿಂದಿನ ಪಿತೂರಿ ಏನಿರಬಹುದು ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಏಕೆಂದರೆ ಅಲ್ಲಿರುವ ವಿಡಿಯೋ ಪರಿಶೀಲನೆ ಮಾಡಿದಾಗ ಯುವಕ ಈ ರೀತಿ ಚಾಕು ಹಿಡಿದು ಬರುವುದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಧ್ವಜವನ್ನು ಹಿಡಿದುಕೊಂಡು ಕಾಂಗ್ರೆಸ್‌ ಪರವಾಗಿ ಘೋಷಣೆ ಮಾಡುತ್ತಿರುವುದು ಕಂಡುಬಂದಿದೆ. ಅದಾದ ಕೆಲವೇ ನಿಮಿಷಗಳಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿ, ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆ ಮಾಡುತ್ತೇನೆ ಎಂದಿದ್ದಾನೆ. ಈತ ಮಾನಸಿಕ ಅಸ್ವಸ್ಥ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಹೇಳುತ್ತಿದ್ದುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇದು ಒಂದೆಡೆಯಾದರೆ, ಯುವಕ ಚಾಕು ಹಿಡಿದು ವೇದಿಕೆಗೆ ಬಂದಿದ್ದು, ಅಲ್ಲಿದ್ದ ಮಾಜಿ ಸಿಎಂ ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸರಿಗೆ ಈ ವಿಚಾರ ಗೊತ್ತಿರದೇ ಇರುವುದು ಭದ್ರತಾ ಲೋಪವನ್ನು ಎತ್ತಿತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮನೋಜ್ ಜೋಶಿ ಕಿಡಿ ಕಾರಿದ್ದಾರೆ. ಯುವಕನ ವಿಚಾರಣೆ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net