ಉಲ್ಟಾ ಹೊಡೆದ ಪಂಜಾಬ್‌ ಸಿಎಂ- ಪ್ರಧಾನಿ ಮೋದಿ ರಕ್ಷಣೆಗೆ ನನ್ನ ಜೀವವನ್ನೇ ಬಲಿಕೊಡುತ್ತಿದ್ದೆ, ಆದ್ರೆ... ಎಂದ ಚನ್ನಿ

modi
Published on

ಅಮೃತಸರ: ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿ ಕೊಟ್ಟ ಸಂದರ್ಭದಲ್ಲಿ ಉಂಟಾದ ಭಾರಿ ವೈಫಲ್ಯದ ಬಗ್ಗೆ ವಿವಾದ ಎದ್ದ ಬೆನ್ನಲ್ಲೇ ಇದರ ಪ್ರಕರಣ ಕೂಡ ಇದಾಗಲೇ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ಪ್ರಧಾನಿ ಮೋದಿ ಅವರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿನ ಖಾಲಿ ಕುರ್ಚಿ ನೋಡಿಕೊಂಡು ವಾಪಸ್‌ ಹೋಗಿದ್ದಾರೆ ಎಂದು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವ್ಯಂಗ್ಯವಾಡಿದ್ದರು. ಆದರೆ ಈಗ ಈ ಘಟನೆ ಬಹಳ ಗಂಭೀರತೆಯನ್ನು ಪಡೆಯುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದು, ‘ನಮ್ಮಿಂದ ಯಾವುದೇ ಕರ್ತವ್ಯಲೋಪ ಆಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣೆಗಾಗಿ ನನ್ನ ಜೀವವನ್ನೇ ಬೇಕಾದರೂ ಕೊಡುತ್ತಿದ್ದೆ. ಆದರೆ ಅವರು ಸೇಫ್‌ ಆಗಿ ಹೋಗಿದ್ದಾರೆ’ ಎಂದು ಹೇಳಿದ್ದಾರೆ.

ಈ ಭದ್ರತಾ ವೈಫಲ್ಯ ಪಂಜಾಬ್ ಸರ್ಕಾರ ನಡೆಸಿದ್ದ ಸಂಚು ಎಂದು ಆರೋಪಿಸಿ ಇದರ ಬಗ್ಗೆ ದೇಶವ್ಯಾ‍ಪಿ ಪಂಜಾಬ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಈಗ ಈ ಮಾತನ್ನು ಚನ್ನಿ ಹೇಳಿದ್ದಾರೆ. ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಒಂದು ವೇಳೆ ಅವರಿಗೆ ಏನಾದರೂ ಅಪಾಯ ಉಂಟಾಗುವ ಸಾಧ್ಯತೆ ಇದ್ದಿದ್ದರೆ ನನ್ನ ಪ್ರಾಣವನ್ನಾದರೂ ಪಣಕ್ಕಿಟ್ಟು ಅವರನ್ನು ರಕ್ಷಿಸುತ್ತಿದ್ದೆ’ ಎಂದಿದ್ದಾರೆ.

‘ಪ್ರತಿಭಟನೆ ಕಾರಣ ರಸ್ತೆ ತಡೆ ಉಂಟಾಯಿತು. ಅದಕ್ಕಾಗಿ ನಾವು ವಿಷಾದಿಸುತ್ತೇವೆ. ಪ್ರಧಾನಿ ಅವರ ಭದ್ರತಾ ಲೋಪ ಆಗಲಿಲ್ಲ. ಆದ್ದರಿಂದ ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ ಎಂದಿರುವ ಮುಖ್ಯಮಂತ್ರಿ, ಫಿರೋಜ್‌ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಹರ್ಮನ್ ಹನ್ಸ್ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂಬ ವರದಿ ಸುಳ್ಳು ಎಂದಿದ್ದಾರೆ.

ಅಸಲಿಗೆ ಪ್ರಧಾನಿಯವರು ಬತಿಂಡಾದಲ್ಲಿ ವಿಮಾನದಿಂದ ಇಳಿದ ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಫಿರೋಜ್‌ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ಆದರೆ ದಟ್ಟನೆಯ ಮೋಡ ಹಾಗೂ ಮಳೆ ಸೂಚನೆ ಇದ್ದ ಹಿನ್ನೆಲೆಯಲ್ಲಿ 100 ಕಿಮೀ ಕಾರಿನಲ್ಲಿಯೇ ಪ್ರಯಾಣಿಸಿದ್ದರು. ಆದರೆ ಅಲ್ಲಿ ಅವರ ಕಾರನ್ನು ಮುತ್ತಿಗೆ ಹಾಕಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net