

ಲಖೀಂಪುರ (ಉತ್ತರ ಪ್ರದೇಶ): ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಭಾನುವಾರ ಪ್ರತಿಭಟನಾಕಾರ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದ ಘಟನೆ ತೀವ್ರ ಸ್ವರೂಪದ ಕಾವು ಪಡೆದುಕೊಳ್ಳುತ್ತಿದ್ದಂತೆಯೇ, ಇದೀಗ ಈ ಪ್ರತಿಭಟನೆಯ ವಿಡಿಯೋ ಅನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರು ಪ್ರತಿಭಟನಾಕಾರರ ಮೇಲೆಯೇ ಕಾರು ಚಲಾಯಿಸಿದ್ದು, ನಾಲ್ವರು ರೈತರು ಸ್ಥಳದಲ್ಲೇ ಅಸುನೀಗಿದ್ದಾಗಿ ರೈತರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರ ಕಾರಿನ ಮೇಲೆ ರೈತರು ಕಲ್ಲುತೂರಾಟ ನಡೆಸಿದ್ದರಿಂದ, ಕಾರು ಪಲ್ಟಿಯಾಯಿತು. ಈ ವೇಳೆ ಇಬ್ಬರು ಸಾವಿಗೀಡಾದರು. ನಂತರ ರೈತರು ಕಾರಿನಲ್ಲಿದ್ದ ನಮ್ಮ ಪಕ್ಷದ ಮೂವರು ಕಾರ್ಯಕರ್ತರು ಹಾಗೂ ಚಾಲಕನಿಗೆ ಥಳಿಸಿ ಕೊಂದುಹಾಕಿದ್ದಾರೆ’ ಎಂದು ಬಿಜೆಪಿ ಹೇಳುತ್ತಿದೆ.
ಈ ನಡುವೆಯೇ ಈ ವಿಡಿಯೋ ಇದೀಗ ಹೊರಬಂದಿದೆ. ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರತ್ತ ಒಂದು ಜೀಪು ಮತ್ತು ಒಂದು ಕಾರು ವೇಗವಾಗಿ ನುಗ್ಗಿ ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋವು ಸುಮಾರು 25 ಸೆಂಕೆಡ್ನದ್ದು ಆಗಿದೆ. ವಾಹನವು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಹೋಗುತ್ತಿದ್ದ ರೈತರ ಮೇಲೆ ಹರಿದು ಹೋಗಿದ್ದು, ಈ ಸಂದರ್ಭದಲ್ಲಿ ರೈತರು ನೆಲದ ಮೇಲೆ ಬಿದ್ದಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಇನ್ನು ಈ ಸಂದರ್ಭದಲ್ಲಿ ಉಳಿದ ರೈತರು ಈ ವಾಹನ ಚಲಿಸುವ ಹಾದಿಯಿಂದ ತಪ್ಪಿಸಿಕೊಳ್ಳಲು ತಡಕಾಡಿದ್ದಾರೆ. ಇನ್ನೊಂದು ವಾಹನ ಸೈರನ್ ಒಂದನ್ನು ಹಾಕುತ್ತಾ ಸಾಗಿದೆ.
ಇದು ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಕಾರು ಎಂದೂ ಹೇಳಲಾಗಿದ್ದು, ಈಗಾಗಲೇ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವಾಹನಗಳು ರೈತರತ್ತ ಹರಿದ ಬೆನ್ನಲ್ಲೇ ಆಶೀಶ್ ಮಿಶ್ರಾ ಬೆಂಗಾವಲು ಪಡೆಯ ಮೇಲೆ ರೈತರು ಮುಗಿಬಿದ್ದಿದ್ದರು.
ಆಗಿದ್ದೇನು? ಇತ್ತೀಚೆಗೆ ಭಾಷಣವೊಂದರಲ್ಲಿ ಕೇಂದ್ರ ಸಚಿವ ಮಿಶ್ರಾ ಅವರು, ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಪ್ರಸ್ತಾಪಿಸಿ, ‘ಇದು 10-15 ಜನರು ನಡೆಸುತ್ತಿರುವ ಪ್ರತಿಭಟನೆಯಾಗಿದ್ದು, ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ 2 ನಿಮಿಷ ಸಾಕು’ ಎಂದು ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು.ಇದೇ ವೇಳೆ ಈ ಘರ್ಷಣೆ ನಡೆದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಯಾರು ಯಾರನ್ನು ಥಳಿಸಿದ್ದಾರೆ, ಇದರ ಅಸಲಿಯತ್ತೇನು ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಸದ್ಯ ಲಖಿಂಪುರ ಖೇರಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಯಾರೂ ಹೋಗುವಂತಿಲ್ಲ.
ವಿಡಿಯೋ ಇಲ್ಲಿದೆ ನೋಡಿ: