More

    ಒಟ್ಟಿಗಿದ್ದದ್ದು ಐದಾರು ದಿನ- ಡಿವೋರ್ಸ್‌ಗೆ ಕೋರ್ಟ್‌ ಅಲೆದಾಡಿದ್ದು 26 ವರ್ಷ: ಹೀಗೊಂದು ವಿಚಿತ್ರ ಕೇಸ್‌!

    ನವದೆಹಲಿ: ದಂಪತಿ ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದರೆ ಏನೆಲ್ಲಾ ಆಗಬಹುದು ಎನ್ನುವುದು ಈ ಉದಾಹರಣೆಯೇ ಸಾಕ್ಷಿಯಾಗಿದೆ. ಈ ದಂಪತಿ ದಾಂಪತ್ಯ ಜೀವನ ನಡೆಸಿದ್ದು ಕೇವಲ ಐದಾರು ದಿನಗಳು. ಆದರೆ 26 ವರ್ಷಗಳ ಕಾಲ ವಿಚ್ಛೇದನಕ್ಕಾಗಿ ಕೋರ್ಟ್‌ ಅಲೆದಾಡುತ್ತಿದ್ದು, ಅಂತೂ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಒಂದು ತಾರ್ಕಿಕ ಅಂತ್ಯ ಕಾಣುತ್ತಿದೆ!

    ಇದು ತ್ರಿಪುರಾ ಮೂಲದ ಐಎಎಸ್‌ ಅಧಿಕಾರಿಯ ಪುತ್ರಿ ಮತ್ತು ಆಕೆಯ ಪತಿಯ ಕಥೆ. 1995ರಲ್ಲಿ ಇವರ ಮದುವೆಯಾಗಿದೆ. ಶ್ರೀಮಂತ ಮನೆತನದವಳಾಗಿರುವ ಕಾರಣ ಹಾಗೂ ತಮಗೇ ಒಬ್ಬಳೇ ಪುತ್ರಿ ಎನ್ನುವ ಕಾರಣಕ್ಕೆ ಐಎಎಸ್‌ ಅಧಿಕಾರಿ, ಅಳಿಯನನ್ನು ಮನೆ ಅಳಿಯನನ್ನಾಗಿ ಇರುವಂತೆ ಹೇಳಿದ್ದಾರೆ. ಮಗಳು ಕೂಡ ಗಂಡನಿಗೆ ಒತ್ತಾಯ ಮಾಡಿದ್ದಾಳೆ. ಆದರೆ ಪತಿಗೆ ಇದು ಇಷ್ಟವಿರಲಿಲ್ಲ. ಏಕೆಂದರೆ ಅವರ ಮನೆಯಲ್ಲಿ ವಯಸ್ಸಾದ ತಾಯಿ, ನಿರುದ್ಯೋಗಿ ತಮ್ಮ ಇದ್ದು, ಅವರ ಜವಾಬ್ದಾರಿ ಈತನ ಮೇಲೆಯೇ ಇತ್ತು.

    ಅಲ್ಲಿಂದ ಶುರುವಾಯ್ತು ಕಚ್ಚಾಟ, 1995ರಲ್ಲಿ ಶುರುವಾದ ಕಚ್ಚಾಟ 2021 ಬಂದರೂ ನಿಂತಿಲ್ಲ. ಪತಿ ವಿಚ್ಛೇದನ ಬೇಕು ಎಂದು, ಪತ್ನಿ ಬೇಡ ಎಂಬ ಹಠ ಹಿಡಿಯುತ್ತಾ ಕುಳಿತಿರುವ ಕಾರಣ, ಕೇಸು ಆ ಕೋರ್ಟ್‌, ಈ ಕೋರ್ಟ್‌ ಎಂದು ಅಲೆದಾಡುತ್ತಲೇ ಸಾಗಿದೆ. ಇದೀಗ ಈಗ ಪತಿಗೆ 55, ಪತ್ನಿಗೆ 50 ವರ್ಷ ವಯಸ್ಸು!

    ಇಷ್ಟು ಸುದೀರ್ಘ ಅವಧಿಯ ನಂತರ ಸುಪ್ರೀಂಕೋರ್ಟ್‌ ಮುಂದೆ ಇಂದು ಈ ಪ್ರಕರಣದ ವಿಚಾರಣೆ ಬಂದಿದೆ. ಆಗ ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ಪೀಠವು ಅರ್ಜಿಯನ್ನು ನೋಡಿ ಅಚ್ಚರಿಪಟ್ಟು ದಂಪತಿಯನ್ನು ಕರೆದು ಬುದ್ಧಿಮಾತು ಹೇಳಿದೆ. ಅದೇನೆಂದರೆ, ನೀವು ಇಡೀ ಬದುಕನ್ನು ಕೋರ್ಟ್‌ನಲ್ಲಿ ಪರಸ್ಪರ ಹೋರಾಟ ನಡೆಸುವ ಮೂಲಕವೇ ಕಳೆಯಲಾಗದು. ನಿಮ್ಮಿಬ್ಬರಿಗೂ ಒಟ್ಟಿಗೆ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ಪ್ರತ್ಯೇಕವಾಗಿ ವಾಸಿಸುವುದೇ ಲೇಸು ಎಂದಿದೆ.

    ಆಗಿದ್ದೇನು?
    ಪತ್ನಿಯ ಮಾತಿಗೆ ಅಸಮ್ಮತಿ ಸೂಚಿಸಿದ ಪತಿ ವಿಚ್ಛೇದನಕ್ಕೆ ಕೋರಿ ತ್ರಿಪುರಾ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ತನಗೆ ವಿಚ್ಛೇದನ ಬೇಡ ಎಂದು ಪತ್ನಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಇದರ ನಡುವೆಯೇ ಜೀವನಾಂಶದ ಕುರಿತೂ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶದ ಅರ್ಜಿ ಇತ್ಯರ್ಥವಾಗಿರಲಿಲ್ಲ. ಈ ಮಧ್ಯೆಯೇ ಕೋರ್ಟ್‌ ಡಿವೋರ್ಸ್‌ಗೆ ಅನುಮತಿ ನೀಡಿತ್ತು.

    ಜೀವನಾಂಶ ಕುರಿತ ವಿಷಯವು ಇತ್ಯರ್ಥವಾಗದ ಕಾರಣ ವಿಚ್ಛೇದನಕ್ಕೆ ಆದೇಶ ನೀಡಿದ ಹೈಕೋರ್ಟ್‌ನ ಕ್ರಮವು ಸರಿಯಾದುದಲ್ಲ ಎಂದು ಪತ್ನಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು. ಆದರೆ ಇದ್ದದ್ದು ಐದಾರು ದಿನ ಮಾತ್ರ, ನನ್ನ ಬದುಕೇ ಸರ್ವನಾಶವಾಗಿದೆ. ಕಿರುಕುಳ ಸಹಿಸಿಕೊಳ್ಳಲು ಆಗದು, ವಿಚ್ಛೇದನ ಬೇಕೇ ಬೇಕು ಎಂದು ಪತಿ ವಾದಿಸಿದ್ದರು. ಜತೆಗೆ ಈಗ ಪತ್ನಿ ಜೊತೆ ಜೀವಿಸಲು ಇಷ್ಟವಿಲ್ಲ. ಜೀವನಾಂಶ ಕೊಡಲು ಸಿದ್ಧ ಎಂದಿದ್ದರು.

    ಆದರೆ ಜೀವನಾಂಶ ಬೇಕು ಎಂದು ಒತ್ತಾಯಿಸುತ್ತಿದ್ದ ಪತ್ನಿ, ವಿಚ್ಛೇದನ ಕೊಟ್ಟಿದ್ದು ಸರಿಯಲ್ಲ ಎಂದು ಮತ್ತೊಂದು ಕೇಸ್‌ ಹಾಕಿದರು. ಹೀಗೆ ಎಳೆದಾಡುತ್ತಾ ಕೇಸು ಸಾಗುತ್ತಲೇ ಬಂದಿದೆ.
    ಈಗ ಕೋರ್ಟ್‌, ನಿಮ್ಮಿಬ್ಬರಿಗೂ ಒಟ್ಟಿಗೆ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ಪ್ರತ್ಯೇಕವಾಗಿ ವಾಸಿಸುವುದೇ ಲೇಸು ಎಂದಿದ್ದು, ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬನ್ನಿ ಎಂದು ಹೇಳುವ ಮೂಲಕ ಅರ್ಜಿಯ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ.

    ಶಾರುಖ್‌ ಪತ್ನಿಗೂ ಡ್ರಗ್ಸ್‌ ನಂಟು? ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಗೌರಿ ಖಾನ್‌!

    VIDEO: ಡ್ರಗ್ಸ್‌, ಸಿಗರೇಟ್‌, ಸೆಕ್ಸ್‌ ಎಲ್ಲದಕ್ಕೂ ಮಗನಿಗೆ ಓಕೆ ಅಂದಿದ್ದೇನೆ: ಶಾರುಖ್‌ ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts