ಮಹಾರಾಷ್ಟ್ರದ ರೆಬೆಲ್​ ಶಾಸಕರ ಗುಂಪಿನಲ್ಲಿ ಇಬ್ಬರು ನಕಲಿ! ಹೋಟೆಲ್​ನಲ್ಲಿ ಸಿಕ್ಕಬಿದ್ದ ಜೋಡಿ...

rebel
Published on

ಪಣಜಿ (ಗೋವಾ): ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ಅಂತ್ಯಗೊಂಡು ರೆಬೆಲ್​ ಶಾಸಕ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳೇ ಕಳೆದಿವೆ. ಇದಕ್ಕೂ ಮೊದಲು ಅಸ್ಸಾಂನ ಗುವಾಹಟಿಯಲ್ಲಿ ಶಿಂಧೆ ನೇತೃತ್ವದ ಬಂಡಾಯ ನಾಯಕರ ಗುಂಪು ಬೀಡು ಬಿಟ್ಟಿತ್ತು. ಅಲ್ಲಿಂದ ಅವರು ಗೋವಾದ ರೆಸಾರ್ಟ್​ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ತಾವು ಈ ಗುಂಪಿನವರು ಎಂದು ಹೇಳಿಕೊಂಡು ಓರ್ವ ಪುರುಷ ಮತ್ತು ಓರ್ವ ಮಹಿಳೆ ಹೋಟೆಲ್​ನಲ್ಲಿ ಉಳಿದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಏಕನಾಥ್​ ಶಿಂಧೆ ಮತ್ತು ಅವರ ಬಣದ 50 ಶಾಸಕರು ಉಳಿದುಕೊಂಡಿದ್ದ ಗೋವಾದ ಡೊನಾ ಪೌಲಾದ ಸ್ಟಾರ್​ ಹೋಟೆಲ್​ನಲ್ಲಿ ತಾವು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಸುಳ್ಳು ಹೇಳಿ ವಾಸ್ತವ್ಯ ಹೂಡಿದ್ದ ಮಹಿಳೆ, ಓರ್ವ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ರೆಬೆಲ್​ ಶಾಸಕರು ಹೋಟೆಲ್​ಗೆ ಉಳಿದುಕೊಂಡಿದ್ದ ಸಂದರ್ಭದಲ್ಲಿ ಬಿಗಿ ಭದ್ರತೆ ನೀಡಲಾಗಿತ್ತು. ಸಾರ್ವಜನಿಕರು, ಮಾಧ್ಯಮದವರಿಗೂ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈ ಜೋಡಿ, ತಾವು ರೆಬೆಲ್​ ಶಾಸಕರ ಗುಂಪಿಗೆ ಸೇರಿದವರು ಎಂದು ಸುಳ್ಳು ಹೇಳಿ ಹೋಟೆಲ್​ನಲ್ಲಿ ಒಂದು ದಿನ ತಂಗಿದ್ದರು. ತಪಾಸಣೆ ನಡೆಸಿದಾಗ ಸುಳ್ಳು ದಾಖಲೆ ನೀಡಿದ್ದು ಗೊತ್ತಾಗಿ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್​ ಸುತ್ತ ನಿರ್ಬಂಧ ಹೇರಿದಾಗಲೂ ಈ ಜೋಡಿ ಬಂದದ್ದು ಹೇಗೆ ಎಂಬ ಬಗ್ಗೆ ಈಗ ತನಿಖೆ ಶುರುವಾಗಿದೆ. ಅದೂ ಅಲ್ಲದೇ ಒಂದು ದಿನ ಹೋಟೆಲ್‌ನಲ್ಲಿ ಆರಾಮಾಗಿ ಉಳಿದುಕೊಂಡರೂ ಯಾರ ಗಮನಕ್ಕೆ ಬರಲಿಲ್ಲ ಹೇಗೆ ಎಂಬ ಬಗ್ಗೆ ಪೊಲೀಸರೂ, ಹೋಟೆಲ್​ನವರೂ ತಲೆ ಕೆಡಿಸಿಕೊಂಡಿದ್ದಾರೆ. ಬಂಧಿತರ ಹೆಸರು, ಮಾಹಿತಿಯನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ. ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಗೋವಾದಲ್ಲಿ ತಂಗಿದ್ದ ಶಿವಸೇನೆ ಬಂಡಾಯ ಶಾಸಕರು ನಿನ್ನೆ ಮಹಾರಾಷ್ಟ್ರಕ್ಕೆ ಮರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net