ದ್ವೇಷಕ್ಕೆ ಉರುಳಿತು 10 ಹೆಣ! ಆರು ಮಂದಿಯ ಇರಿದು ಕೊಂದರು- ನಾಲ್ವರನ್ನು ಸಜೀವವಾಗಿ ಸುಟ್ಟರು...

murder
Published on

ವಿಶಾಖಪಟ್ಟಣ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಎರಡು ಕುಟುಂಬದ 10 ಮಂದಿಯ ಬರ್ಬರ ಕೊಲೆಯಾಗಿರುವ ಭಯಾನಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ 6 ಜನರನ್ನು ವಿಶಾಖಪಟ್ಟಣ ಜಿಲ್ಲೆಯ ಜುತ್ತಾಡದಲ್ಲಿ ಕೊಲೆ ಮಾಡಲಾಗಿದೆ. ಮಿಥಿಲಾಪುರಿ ಉಡಾ ಕಾಲೋನಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಸಜೀವವಾಗಿ ದಹನ ಮಾಡಲಾಗಿದೆ.

ಜುತ್ತಾಡದಲ್ಲಿ ಕೊಲೆಯಾದವರನ್ನು ರಮಣ, ಉಷಾರಾಣಿ, ರಮಾದೇವಿ, ಅರುಣ, ಮಕ್ಕಳಾದ ಉದಯ, ಉರ್ವೀಷ ಎಂದು ಗುರುತಿಸಲಾಗಿದೆ. ಇವರ ಕುಟುಂಬದ ಸದಸ್ಯರಲ್ಲಿ ಒಬ್ಬನಾಗಿರುವ ಅಪ್ಪಲರಾಜು ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎಲ್ಲರನ್ನೂ ಇರಿದು ಕೊಲೆ ಮಾಡಲಾಗಿದೆ.

ಈ ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆರು ಮಂದಿಯನ್ನು ಅವರ ಮನೆಯಲ್ಲಿ ಭೀಕರವಾಗಿ ಈತ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಿಥಿಲಾಪುರಿ ನಡೆದ ಸಜೀವ ದಹನ ಪ್ರಕರಣದಲ್ಲಿ ಒಂದೇ ಕುಟುಂಬದ ಬಂಗಾರುನಾಯ್ಡು(50), ಡಾ.ನಿರ್ಮಲಾ(44), ಮಕ್ಕಳಾದ ದೀಪಕ್(22), ಕಶ್ಯಪ್(19) ಅವರನ್ನು ಸಜೀವವಾಗಿ ಸುಡಲಾಗಿದೆ.

ಮನೆಗೆ ಬೆಂಕಿ ಹಚ್ಚಿ ಇವರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಆದರೆ ಇದುವರೆಗೆ ಆರೋಪಿಗಳು ಸೆರೆ ಸಿಕ್ಕಿಲ್ಲ. ಇದು ಆತ್ಮಹತ್ಯೆಯೋ, ಆಕಸ್ಮಿಕವೋ, ಕೊಲೆಯೋ ಎಂಬ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net