ಭಕ್ತರಿಗೆ ತಿಮ್ಮಪ್ಪ ದರ್ಶನ ನೀಡಿದ ಬೆನ್ನಲ್ಲೇ 743 ಸಿಬ್ಬಂದಿಗೆ ಸೋಂಕು- ಮೂರು ಬಲಿ

TTD
Published on

ತಿರುಮಲ : ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಈ ಸಮಯದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂದೆನಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಸಹಸ್ರಾರು ಕೋಟಿ ರೂಪಾಯಿ ನಷ್ಟವಾಯಿತು.

ಕೊನೆಗೊಮ್ಮೆ ತನ್ನ ಸಿಬ್ಬಂದಿಗೂ ಸಂಬಳ ಕೊಡಲು ದುಡ್ಡಿಲ್ಲ ಎಂದು ಕೊರಗಿದ ಆಡಳಿತ ಮಂಡಳಿ ಗಟ್ಟಿ ಮನಸ್ಸು ಮಾಡಿ ಜೂನ್‌ 11ರಿಂದ ದೇವಾಲಯವನ್ನು ತೆರೆದು ಭಕ್ತರಿಗೆ ತಿಮ್ಮಪ್ಪನ ದರುಶನ ಕಲ್ಪಿಸಿಕೊಟ್ಟಿತು. ಅಚ್ಚರಿಯ ರೀತಿಯಲ್ಲಿ ಕೋಟಿ ಕೋಟಿ ರೂಪಾಯಿ ಆದಾಯವೂ ಭಕ್ತರಿಂದ ಕೆಲವೇ ದಿನಗಳಲ್ಲಿ ತಿಮ್ಮಪ್ಪನ ಹುಂಡಿ ಸೇರಿತು.

ಭಕ್ತರು ಹೆಚ್ಚುತ್ತಲೇ ಇದೀಗ ತಿಮ್ಮಪ್ಪನ ದೇವಾಲಯದ ಸಿಬ್ಬಂದಿಯಲ್ಲಿಯೂ ಕರೊನಾ ಸೋಂಕು ಏರುತ್ತಲೇ ಸಾಗಿದೆ. ಇಲ್ಲಿಯವರೆಗೆ 743 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಅನಿಲ್ ಕುಮಾರ್ ಸಿಂಗ್ ಅವರು ಕೋವಿಡ್ ಸೋಂಕಿನಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಿ ನಂತರ ಜೂನ್ 11ರಿಂದ ದೇವಾಲಯಗಳ ದರ್ಶನಕ್ಕೆ ಅವಕಾಶ ಕಲ್ಪಿಸಿದ ನಂತರದಲ್ಲಿ ದೇವಾಲಯದ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು 743 ಸಿಬ್ಬಂದಿಗೆ ಸೋಂಕು ತಗುಲಿತ್ತು.

ಈ ಪೈಕಿ ಇದಾಗಲೇ 402 ಮಂದಿ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದರು.

ದೇಶದೆಲ್ಲೆಡೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ನಮ್ಮ ಸಿಬ್ಬಂದಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆಯನ್ನು ಕೋವಿಡ್ ಕೇಂದ್ರದಿಂದ ಒದಗಿಸುತ್ತಿದ್ದೇವೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net