ಗೆದ್ದೇ ಗೆಲ್ಲುವೆ ಎಂದು ಟ್ರಂಪ್​ ಟ್ವೀಟ್​ ಮಾಡಿದರೆ, ಮತ ಹಾಕಿ ಎಂದು ಪುತ್ರನ ಎಡವಟ್ಟು!

trump1
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟಗೊಂಡು ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬೈಡೆನ್​ ಅವರನ್ನು ಚುನಾಯಿತರು ಎಂದು ಘೋಷಿಸಿಯಾಗಿದ್ದರೂ, ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾತ್ರ ಪಟ್ಟುಬಿಡುತ್ತಿಲ್ಲ. ಮೊದಲಿನಿಂದಲೂ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿದೆ ಎನ್ನುತ್ತಲೇ ಬಂದಿರುವ ಟ್ರಂಪ್​, ಇದೀಗ ಟ್ವೀಟ್​ ಮಾಡುವ ಮೂಲಕ ತಾವೇ ಮುಂದೆಯೂ ಅಧ್ಯಕ್ಷರು ಎಂದು ಹೇಳಿಕೊಂಡಿದ್ದಾರೆ.

ನಿನ್ನೆ ಶ್ವೇತಭವನದಲ್ಲಿ ಮಾತನಾಡಿದ ಅವರು, ನಾವು ಖಂಡಿತಾ ಗೆಲ್ಲುತ್ತೇವೆ, ಮುಂದಿನ ವಾರ ಫಲಿತಾಂಶ ಹೊರಬೀಳಲು ಆರಂಭವಾಗುತ್ತದೆ. ಅಮೆರಿಕವನ್ನು ಮತ್ತೆ ದೊಡ್ಡ ರಾಷ್ಟ್ರವನ್ನಾಗಿ ಮಾಡೋಣ, ಜೋ ಬೈಡೆನ್​ ಅವರ ಸಿದ್ಧತೆಗಳನ್ನು ತಡೆಯೋಣ ಎಂದಿದ್ದಾರೆ. ಜತೆಗೆ, ಟ್ವೀಟ್​ ಮಾಡುವ ಮೂಲಕ 'ನಾವು ಗೆಲ್ಲುತ್ತೇವೆ' ಎಂದಿದ್ದಾರೆ.

ಸದ್ಯ ಟ್ರಂಪ್​ ಅವರ ಅಧಿಕಾರಾವಧಿ 2021ರ ಜನವರಿಯವರೆಗೆ ಇದೆ. ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನ ಡಿಸೆಂಬರ್ 8ರೊಳಗೆ ಬಗೆಹರಿಸಿಕೊಳ್ಳಬೇಕಿದೆ. ಅಲ್ಲಿವರೆಗೆ ಸಮಯ ಇರುವ ಹಿನ್ನೆಲೆಯಲ್ಲಿ ಹಾಗೂ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ಕಾನೂನು ಹೋರಾಟ ನಡೆಸುತ್ತಿರುವ ಕಾರಣ, ಅಧಿಕಾರ ಹಸ್ತಾಂತರ ಮಾಡಲು ಟ್ರಂಪ್ ಹಿಂದೇಟು ಹಾಕುತ್ತಿದ್ದಾರೆ.

ಈ ಬಗ್ಗೆ ನಿನ್ನೆ ಮಾಧ್ಯಮಗಳ ಎದುರು ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋಗೆ ಮಾತನಾಡುತ್ತಿದ್ದಾಗ, ಬೈಡೆನ್​ ಅವರಿಗೆ ಅಧಿಕಾರ ಹಸ್ತಾಂತರ ಆಗುವುದು ಯಾವಾಗ ಎಂದು ಪ್ರಶ್ನಿಸಿದಾಗ, 'ಡೊನಾಲ್ಡ್ ಟ್ರಂಪ್ ಅವರಿಗೇ ಎರಡನೆಯ ಅವಧಿಗೂ ಅಧಿಕಾರ ಹಸ್ತಾಂತರವಾಗುತ್ತದೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೈಡೆನ್, 'ಅಧ್ಯಕ್ಷೀಯ ಚುನಾವಣೆಯಲ್ಲಾಗಿರುವ ಸೋಲನ್ನು ಡೊನಾಲ್ಡ್​ ಟ್ರಂಪ್ ಒಪ್ಪಿಕೊಳ್ಳದೇ ಇರೋದು ಮುಜುಗರದ ಸಂಗತಿ.ಆದರೆ ಅಧಿಕಾರ ಹಸ್ತಾಂತರವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಅಂತ ಹೇಳಿದ್ದಾರೆ.

ಸಾಮಾನ್ಯವಾಗಿ ನೂತನ ಅಧ್ಯಕ್ಷರ ಘೋಷಣೆಯಾದಾಗ ನಿರ್ಗಮಿತ ಅಧ್ಯಕ್ಷರು ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿ ವ್ಯವಸ್ಥೆ ಬಗ್ಗೆ ತೋರಿಸಿಕೊಡಬೇಕು, ಔಪಚಾರಿಕವಾಗಿ ಶುಭಾಶಯ ತಿಳಿಸಬೇಕಾಗುತ್ತದೆ. ಆದರೆ ಅದಾವ ಕೆಲಸಗಳನ್ನು ಕೂಡ ಡೊನಾಲ್ಡ್ ಟ್ರಂಪ್ ಮಾಡಿಲ್ಲ. ಜೊ ಬೈಡನ್ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿಲ್ಲ. ಮುಂಬರುವ ಅಧ್ಯಕ್ಷರಿಗೆ ಸಿಗುವ ಯಾವ ಸೌಲಭ್ಯಗಳು ಕೂಡ, ಅದರಲ್ಲೂ ಬದಲಾವಣೆ ರೂಪಾಂತರ ನಿಧಿ ಜೋಬೈಡನ್ ಅವರಿಗೆ ಸಿಗದಂತೆ ಡೊನಾಲ್ಡ್ ಟ್ರಂಪ್ ಅವರು ತಡೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಡೊನಾಲ್ಡ್ ಟ್ರಂಪ್ ಪುತ್ರ ಎರಿಕ್ ಟ್ರಂಪ್, ಮಿನ್ನಸೊಟಾ ಜನ ಮನೆಯಿಂದ ಹೊರಬಂದು ಮತ ಹಾಕಿ ಎಂದು ಟ್ವೀಟ್ ಮಾಡಿಬಿಟ್ಟಿದ್ದರು. ನಂತರ ತಾವು ತಪ್ಪು ಮಾಡಿರುವುದು ತಿಳಿದು ಅದನ್ನು ಡಿಲೀಟ್​ ಮಾಡಿದ್ದಾರೆ. ಆದರೆ ಅದರ ಸ್ಕ್ರೀನ್ ಶಾಟ್ ಅನೇಕ ಮಂದಿ ತೆಗೆದುಕೊಂಡಿರುವ ಕಾರಣ, ಅದು ಶೇರ್​ ಆಗುತ್ತಲೇ ಇದೆ, ಟ್ರೋಲ್​ ಆಗುತ್ತಲೇ ಸಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net