ಮೂರು ಮಂದಿಯನ್ನು ಕೊಲೆ ಮಾಡಿದ್ದ ಹುಬ್ಬಳ್ಳಿ ಯೋಧನಿಗೆ 24 ವರ್ಷ ಶಿಕ್ಷೆ, 2.20 ಲಕ್ಷ ದಂಡ ವಿಧಿಸಿದ ಕೋರ್ಟ್

hubli
Published on

ಹುಬ್ಬಳ್ಳಿ: ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಯೋಧನಿಗೆ 24 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿ ಹುಬ್ಬಳ್ಳಿಯ ಸೆಷನ್ಸ್‌ ಕೋರ್ಟ್‌ ಆದೇಶಿಸಿದೆ.

ಸಿ.ಆರ್.ಪಿ.ಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಈತ ಕೊಲೆ ಮಾಡಿದ್ದ. 2010 ರಲ್ಲಿ ಮದುವೆಯಾಗಿದ್ದ ಶಂಕ್ರಪ್ಪ ಹಾಗೂ ಈತನ ಪತ್ನಿ ನಡುವೆ ವಾಗ್ವಾದ ಉಂಟಾಗಿ ಹೆಂಡತಿ ತವರು ಸೇರಿದ್ದಳು.

ಪತ್ನಿ ತವರು ಮನೆಗೆ ಹೋಗಲು ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಕಾರಣ ಎಂದು ಭಾವಿಸಿದ್ದ ಶಂಕ್ರಪ್ಪ ಅವರನ್ನೂ ಮುಗಿಸುವ ಪ್ಲ್ಯಾನ್ ಮಾಡಿದ್ದ. ಇದರ ಜತೆಗೆ, ತನ್ನ ತಾಯಿಯ ಆಸ್ತಿಯೂ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ಸಹಕರಿಸಲಿಲ್ಲ ಎಂಬ ದ್ವೇಷವೂ ಇತ್ತು.

ಈ ಹಿನ್ನೆಲೆಯಲ್ಲಿ ಬೆಟದೂರು ಗ್ರಾಮದ ಯಲ್ಲಪ್ಪ ಭಜಂತ್ರಿ (38) ಸೋಮಪ್ಪ ಭಜಂತ್ರಿ (11) ಐಶ್ವರ್ಯ ಭಜಂತ್ರಿ (9) ಅವರನ್ನು ತಾನು ಅಕ್ರಮವಾಗಿ ತಾನು ಹೊಂದಿದ್ದ ಬಂದೂಕಿನಿಂದ ಗಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಘಟನೆಯಲ್ಲಿ ಮದನಕುಮಾರ ಎಂಬುವವರು ಗಾಯಗೊಂಡಿದ್ದರು. ಈ ವೇಳೆ ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು.

ಪ್ರಕರಣ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ದೇವಂದ್ರಪ್ಪ ಎನ್. ಬಿರಾದಾರ ಅವರ ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net