VIDEO: ಧಗಧಗ ಹೊತ್ತಿ ಉರಿದ ರೈಲು- ಬೋಗಿಗಳ ಬೇರ್ಪಡಿಸಿ ಜೀವ ಉಳಿಸಿಕೊಂಡ ಪ್ರಯಾಣಿಕರು! ವಿಡಿಯೋ ವೈರಲ್‌

train
Published on

ಮೀರತ್: ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಪ್ರಯಾಣಿಕರೇ ರೈಲನ್ನು ತಳ್ಳಿಕೊಂಡು ಹೋಗಿರುವ ಘಟನೆ ಉತ್ತರಪ್ರದೇಶದ ಮೀರತ್‌ನ ‌ ದೌರಾಲಾದಲ್ಲಿ ನಡೆದಿದೆ.

ದೌರಾಲಾ ನಿಲ್ದಾಣದ ಬಳಿ ಶನಿವಾರ ಸಹರಾನ್‌ಪುರದಿಂದ ದೆಹಲಿ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದ್ದರಿಂದ ಬೋಗಿಗಳನ್ನು ಬೇರ್ಪಡಿಸಲು ಪ್ರಯಾಣಿಕರು ರೈಲನ್ನು ತಳ್ಳಿಕೊಂಡು ಹೋಗಿದ್ದು ದೃಶ್ಯವೀಗ ವೈರಲ್‌ ಆಗಿದೆ. ಎರಡು ಬೋಗಿಗಳು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ. ಆದರೆ ಬೋಗಿಗಳನ್ನು ಬೇರ್ಪಡಿಸಿದ್ದರಿಂದ ಉಳಿದ ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಳ್ಳದ ಕಾರಣ ಪ್ರಯಾಣಿಕರು ಪಾರಾಗಿದ್ದಾರೆ. ದೌರಾಲಾ ರೈಲ್ವೆ ಸ್ಟೇಶನ್​​ನಲ್ಲಿ ಸಹರಾನ್​ಪುರ-ದೆಹಲಿ ರೈಲು ನಿಂತಿತ್ತು. ಹೀಗಾಗಿ ಪ್ರಯಾಣಿಕರು ಬೇಗನೇ ಬೋಗಿಗಳಿಂದ ಇಳಿದು ತುರ್ತು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿದೆ.

ರೈಲು ಬೆಳಗ್ಗೆ 5.30ಕ್ಕೆ ಸಹರಾನ್‌ಪುರದಿಂದ ದೆಹಲಿಗೆ ತೆರಳುತ್ತಿತ್ತು. ದೆಹಲಿಯಿಂದ ಸುಮಾರು 90 ಕಿಮೀ ದೂರದಲ್ಲಿರುವ ದೌರಾಲಾವನ್ನು ತಲುಪಿತ್ತು. ಈ ವೇಳೆ ಬೋಗಿಗಳಿಂದ ಹೊಗೆ ಬಂದಿದೆ. ಬೆಳಗ್ಗೆ 7.10ಕ್ಕೆ ರೈಲು ದೌರಾಲಾ ನಿಲ್ದಾಣವನ್ನು ತಲುಪಿದಾಗ ಎರಡು ಬೋಗಿಗಳು ಬೆಂಕಿಗಾಹುತಿಯಾಗಿದ್ದವು ಎಂದು ಮೀರತ್ ಸಿಟಿ ರೈಲ್ವೇ ನಿಲ್ದಾಣದ ಸೂಪರಿಂಟೆಂಡೆಂಟ್ ಆರ್‌.ಪಿ. ಶರ್ಮಾ ತಿಳಿಸಿದ್ದಾರೆ.

ಎಂಜಿನ್​ ಬೇರ್ಪಟ್ಟ ಹಿನ್ನೆಲೆ ರೈಲು ಮುಂದೆ ಚಲಿಸಲು ಸಾಧ್ಯವಿಲ್ಲ. ಹೀಗಾಗಿ ಬೆಂಕಿ ತಗುಲಿದ ಕೋಚ್​ಗಳನ್ನು ಕೂಡಲೇ ಬೇರ್ಪಡಿಸಲು ಪ್ರಯಾಣಿಕರು ಬಸ್, ಲಾರಿಗಳನ್ನು ತಳ್ಳಿದಂತೆ ರೈಲನ್ನು ಸಹ ತಳ್ಳಿಕೊಂಡು ಹೋಗಿದ್ದಾರೆ. ಎರಡು ಬೋಗಿಗಳಿಗೆ ಆವರಿಸಿದ್ದ ಬೆಂಕಿ, ಉಳಿದ ಬೋಗಿಗಳನ್ನು ವ್ಯಾಪಿಸಿ ಕೊಳ್ಳದೇ ಇರಲಿ ಎಂದು ರೈಲನ್ನು ಪ್ರಯಾಣಿಕರು ತಳ್ಳಿಕೊಂಡು ಹೋಗಿದ್ದಾರೆ.

ಬೆಂಕಿ ಇನ್ನಷ್ಟು ಬೋಗಿಗಳಿಗೆ ವ್ಯಾಪಿಸುವ ಸಾಧ್ಯತೆ ದಟ್ಟವಾಗಿತ್ತು. ಇದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಸ್ಟೇಶನ್​​ನಲ್ಲಿದ್ದ ಪ್ರಯಾಣಿಕರೆಲ್ಲ ಸೇರಿ, ಉದ್ದನೆಯ ರೈಲನ್ನು ತಳ್ಳಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಬ್ಯಾಕ್‌ಪ್ಯಾಕ್‌ಗಳನ್ನು ಹೊತ್ತ ಪ್ರಯಾಣಿಕರು, ಉರಿಯುತ್ತಿರುವ ಭಾಗದಿಂದ ರೈಲಿನ ಉಳಿದ ಕೋಚ್‌ಗಳನ್ನು ಎಳೆದು ತಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ...


(ಕೃಪೆ  Sahil Online TV news)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net