

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಒಂದೆಡೆ ಚುನಾವಣೆಯ ರಂಗು ಏರುತ್ತಿದೆ. ಇನ್ನೊಂದೆಡೆ ರಾಜಕೀಯ ಪಕ್ಷಗಳ ಮಾತಿನ ಸಮರ ಶುರುವಾಗಿದ್ದರೆ, ಅದೇ ಮತ್ತೊಂದೆಡೆ ಬಾಂಬ್ ಬ್ಲಾಸ್ಟ್ಗಳು ನಡೆಯುತ್ತಿವೆ. ಕಳೆದ ವಾರವಷ್ಟೇ ಕಚ್ಚಾ ಬಾಂಬ್ ಒಂದು ಸ್ಫೋಟಗೊಂಡು ಆತಂಕ ಸೃಷ್ಟಿಸಿದ್ದ ಬೆನ್ನಲ್ಲೇ ನಿನ್ನೆ ಒಟ್ಟು 15 ಕಡೆಗಳಲ್ಲಿ ಬ್ಲಾಸ್ಟ್ ಆಗಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ 15 ಕಡೆಗಳಲ್ಲಿ ಬಾಂಬ್ ಸ್ಫೋಟದಲ್ಲಿ ಮಗು ಸೇರಿದಂತೆ ಮೂವರು ವ್ಯಕ್ತಿಗಳ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಂಬ್ ಸ್ಫೋಟಗೊಂಡ ಸ್ಥಳದಿಂದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸ ಸಮೀಪದಲ್ಲಿದ್ದು, ಈ ಸ್ಫೋಟದ ಹಿಂದೆ ಹಲವಾರು ಗುಮಾನಿಗಳು ಶುರುವಾಗಿವೆ.
15 ಸ್ಥಳಗಳಲ್ಲಿ ಕಚ್ಚಾ ಬಾಂಬ್ ಎಸೆದಿರುವ ದುಷ್ಕರ್ಮಿಗಳು, ತಮ್ಮ ಗುರುತು ಸಿಗಬಾರದು ಎನ್ನುವ ಕಾರಣದಿಂದ ಕೃತ್ಯಕ್ಕೂ ಮುನ್ನ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.