

ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾರಿ ಮೊತ್ತದ ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್ನ ಮೂವರು ಶಾಸಕರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ. ಪೊಲೀಸರು ಶನಿವಾರ (ಜುಲೈ 30) ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ, ಈ ಮೂವರು ಶಾಸಕರ ಕಾರನ್ನು ತಡೆದಿದ್ದಾಗ ಅದರೊಳಗೆ ಅಪಾರ ಪ್ರಮಾಣದ ಹಣ ಪತ್ತೆಯಾಗಿತ್ತು. ಈ ಹಣವು 48 ಲಕ್ಷ ರೂಪಾಯಿ ಎನ್ನಲಾಗಿದೆ.
ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರು ಪ್ರಯಾಣಿಸುತ್ತಿದ್ದ ಎಸ್ಯುವಿಯನ್ನು ಪಂಚಲಾ ಪೊಲೀಸ್ ಠಾಣಾ ವ್ಯಾಪ್ತಿಯ ರಾನಿಹಟಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಪಶ್ಚಿಮ ಬಂಗಾಳ ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿತ್ತು.
ಇದು ಭಾರಿ ಸುದ್ದಿಯಾಗುತ್ತಲೇ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಮೂವರು ಶಾಸಕರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿಸಿದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೂವರು ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಅಲ್ಲದೇ, ರಾಜ್ಯ ಸರ್ಕಾರವನ್ನು ಉರುಳಿಸಲು ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ವಿಕ್ಸಲ್ ಕೊಂಗಾಡಿ ಪಿತೂರಿ ನಡೆಸಿದ್ದಾರೆ ಎಂದು ಇವರ ವಿರುದ್ಧ ಆರೋಪಿಸಲಾಗಿದೆ.
ಅದೇ ಇನ್ನೊಂದೆಡೆ, ಪೊಲೀಸರ ವಶದಲ್ಲಿದ್ದ ಈ ಮೂವರು ಶಾಸಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರು ವಾಹನ ಖರೀದಿ ಉದ್ದೇಶಕ್ಕಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅದೇ ಕಾರಣಕ್ಕಾಗಿ ಹಣವನ್ನು ಸಾಗಿಸುತ್ತಿದ್ದರು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಹಣವನ್ನು ಕಾರು ಖರೀದಿಗಾಗಿಯೇ ಅಥವಾ ಇನ್ನಾವುದೇ ವಸ್ತು ಖರೀದಿಗಾಗಿಯೇ ಸಾಗಿಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಬಿಜೆಪಿಯ ಆಪರೇಷನ್ ಕಮಲದ ಕುತಂತ್ರ ಎಂದೂ ಕಾಂಗ್ರೆಸ್ ದೂರಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ರಾಜೇಶ್ ಠಾಕೂರ್, ಈ ಪಿತೂರಿಯ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಹಳ ಸಮಯದಿಂದ ಬಿಜೆಪಿ ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸಿದರು ಎಂಬುದು ಸಾರ್ವಜನಿಕರಿಗೆ ತಿಳಿದಿದೆ ಎಂದರು. (ಏಜೆನ್ಸೀಸ್)