VIDEO: ಆಂಜನೇಯನ ಫೋಟೋ ತೆಗೆದ... ಕಾಪಾಡಪ್ಪಾ ತಂದೆ ಎಂದ... ಹುಂಡಿ ಎತ್ತಾಕ್ಕೊಂಡು ಹೋದ- ಸಿಸಿಟಿವಿಯಲ್ಲಿ ಸೆರೆ

theft
Published on

ಥಾಣೆ (ಮಹಾರಾಷ್ಟ್ರ): ದೇವರ ತಲೆಯ ಮೇಲೆಯೇ ಕಾಲಿಟ್ಟು ಹಂಚುತೆಗೆದು ಕಳ್ಳತನ ಮಾಡುವವರು ಇದ್ದಾರೆ, ದೇವರ ಹುಂಡಿಗೆ ಕೈಹಾಕಿ ಅದನ್ನು ಎತ್ತಿಕೊಂಡು ಹೋಗುವವರೂ ಸಾಕಷ್ಟು ಮಂದಿ ಇದ್ದಾರೆ. ಅಂಥದ್ದೇ ಒಬ್ಬ ಕಳ್ಳನ ವಿಡಿಯೋ ಇದೀಗ ವೈರಲ್‌ ಆಗಿದೆ. ಸಿಸಿಟಿವಿಯಲ್ಲಿ ಈ ಕಳ್ಳ ಮಾಡಿರುವುದು ಕಂಡು ನೆಟ್ಟಿಗರಿಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ.

ಮಹಾರಾಷ್ಟ್ರದ ಥಾಣೆಯ ಆಂಜನೇಯ ದೇವಸ್ಥಾನದಲ್ಲಿ ನಡೆದಿದೆ ಈ ಘಟನೆ. ಮೊದಲಿಗೆ ದೇವಾಲಯವನ್ನು ಪ್ರವೇಶಿಸುವ ಈ ಯುವಕ ಅತ್ತ ಇತ್ತ ನೋಡಿದ್ದಾನೆ. ಯಾರಾದರೂ ನೋಡುತ್ತಿರಬಹುದೇನೋ ಎಂದು ಮೊದಲಿಗೆ ಮೊಬೈಲ್‌ನಿಂದ ದೇವರ ಫೋಟೋಗಳನ್ನು ತೆಗೆದುಕೊಳ್ಳುವಂತೆ ನಾಟಕವಾಡಿದ್ದಾನೆ. ಹಾಗೆ ಗಮನಿಸುತ್ತಾ ದೇವರಿಗೆ ನಮಸ್ಕಾರ ಮಾಡಿದ್ದಾನೆ. ಮತ್ತೆ ಅತ್ತಿತ್ತ ನೋಡಿದ್ದಾನೆ.

ಯಾರೂ ಇಲ್ಲ ಎಂದು ತಿಳಿಯುತ್ತಿದ್ದಂತೆಯೇ ಆಂಜನೇಯನ ವಿಗ್ರಹದ ಬಳಿ ಬಂದು ಪಾದ ಮುಟ್ಟಿ ನಮಸ್ಕರಿಸಿ ಹುಂಡಿಯೊಂದನ್ನು ಕದ್ದು ಪಲಾಯನಮಾಡಿದ್ದಾನೆ.

ಈ ದೇಗುಲದಲ್ಲಿ ಸದಾ ಪೂಜಾರಿಯೊಬ್ಬರು ಇರುತ್ತಿದ್ದರು. ಆದರೆ ಯಾವುದೋ ಕೆಲಸದ ನಿಮಿತ್ತ ನಿಮಿಷ ಹೊರಗಡೆ ಹೋಗಿದ್ದಾರೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಯುವಕ ಕೃತ್ಯ ಎಸಗಿದ್ದಾನೆ. ಆ ಹುಂಡಿಯಲ್ಲಿ ಒಂದು ಸಾವಿರ ರೂಪಾಯಿ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಹೊರಗಡೆ ಕೂಡ ಇನ್ನೋರ್ವ ಇದ್ದುದು ಕಂಡುಬಂದಿದೆ.

ಇಬ್ಬರ ಗ್ರಹಚಾರ ನೆಟ್ಟಗಿರಲಿಲ್ಲ. ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾದ್ದರಿಂದ ಇಬ್ಬರೂ ಖದೀಮರು ಸಿಕ್ಕಿಬಿದ್ದಿದ್ದಾರೆ.

ಇಲ್ಲಿದೆ ನೋಡಿ ಕಳ್ಳತನದ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net