

ಮೊದಲೆಲ್ಲಾ ಮದುವೆಯ ದಿನಗಳಷ್ಟೇ ಫೋಟೋ ಹೊಡೆಸಿಕೊಳ್ಳುತ್ತಿದ್ದರು. ಆದರೆ ಪ್ರೀವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ಗಳು ಕೆಲ ವರ್ಷಗಳಿಂದ ಭಾರಿ ಟ್ರೆಂಡ್ ಆಗಿವೆ. ಮದುವೆಯ ದಿನಗಿಂತಲೂ ಹೆಚ್ಚಾಗಿ ಮದುವೆಯ ಮುನ್ನ ಈ ಜೋಡಿಗಳ ಫೋಟೋ ಹೊಡೆಸಿಕೊಳ್ಳುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿವಿಧ ಭಂಗಿಗಳಲ್ಲಿ ಫೋಟೋ ಹೊಡೆಸಿಕೊಳ್ಳುವುದು ಇದೀಗ ಮಾಮೂಲಾಗಿಬಿಟ್ಟಿದೆ.
ಈ ರೀತಿ ಫೋಟೋಶೂಟ್ ಮಾಡಿಸಿಕೊಳ್ಳುವಾಗ ನಡೆದಿರುವ ಎಡವಟ್ಟುಗಳು ಅದೆಷ್ಟೋ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಅದೇನೆಂದರೆ, ವಧು ಫೋಟೋಶೂಟ್ ಮಾಡಿಸಲು ನದಿ ಬಳಿ ತೆರಳಿದ್ದಾಳೆ. ನದಿಯ ಬಳಿ ಇರುವ ಉಯ್ಯಾಲೆಯಲ್ಲಿ ಕುಳಿತು ಫೋಟೋಶೂಟ್ ಮಾಡಿಸಿಕೊಳ್ಳುವ ಪ್ಲ್ಯಾನ್ ಇತ್ತು. ಅದರಂತೆಯೇ ಫೋಟೋಶೂಟ್‌ಗೆ ಉಯ್ಯಾಲೆ ಮೇಲೆ ಆಕೆ ಕುಳಿತಿದ್ದಾಳೆ. ಹಿಂದಿನಿಂದ ಓರ್ವ ಉಯ್ಯಾಲೆ ತೂಗುತ್ತಾನೆ. ಇದರ ವಿಡಿಯೋ ಮಾಡಲಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಉಯ್ಯಾಲೆಯ ಹಗ್ಗ ತುಂಡಾಗಿ ವಧು ನೀರಿನಲ್ಲಿ ಬಿದ್ದಿದ್ದಾಳೆ.
ಆದರೆ ಅದೃಷ್ಟಕ್ಕೆ ಅವಳಿಗೆ ಈಜು ಬರುತ್ತಿದ್ದುದರಿಂದ ನಗುತ್ತಾ ಈಜಿಕೊಂಡು ದಡ ಸೇರಿದ್ದಾಳೆ. ಪಂಜಾಬ್ ಇಂಡಸ್ಟ್ರಿ ಹೆಸರಿನ ಇನ್ ಸ್ಟಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಭಾರಿ ವೈರಲ್ ಆಗಿದೆ. ಅಂದಹಾಗೆ ಕೆಲ ತಿಂಗಳ ಹಿಂದೆ ಕೇರಳದ ಜೋಡಿಯೊಂದು ತೆಪ್ಪದಲ್ಲಿ ಫೋಟೋಶೂಟ್ ಮಾಡಿಸಲು ಹೋಗಿ ತೆಪ್ಪ ಮಗುಚಿ ಇಬ್ಬರೂ ಪ್ರಾಣ ಕಳೆದುಕೊಂಡಿರುವ ದುರ್ಘಟನೆಯೂ ನಡೆದಿತ್ತು.