

ಕರೂರು (ತಮಿಳುನಾಡು): ಅತ್ಯಾಚಾರಕ್ಕೆ ಒಳಗಾಗಿ ಸಾವಿನ ಹಾದಿ ತುಳಿದಿರುವ ಕರೂರಿನ 17 ವರ್ಷದ ಬಾಲಕಿಯೊಬ್ಬಳು ಬರೆದಿಟ್ಟಿರುವ ಡೆತ್ನೋಟ್ ಎಂಥವರ ಕರುಳನ್ನೂ ಹಿಂಡುವಂತಿದೆ.
12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮನೆಗೆ ಬರುವ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಅದೇ ಸಂದರ್ಭದಲ್ಲಿ ಜೀವನಕ್ಕೆ ಅಂತ್ಯ ಹಾಡಿದ್ದಾಳೆ ಈ ಬಾಲಕಿ. ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ವಿಷಯ ಬಹಿರಂಗಗೊಂಡಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್ನೋಟ್ ಬರೆದ ಬಾಲಕಿ:
ಆತ್ಮಹತ್ಯೆಗೂ ಮುನ್ನ ಬಾಲಕಿ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಅದರಲ್ಲಿ ಆಕೆ, ’ಕರೂರ್ ಜಿಲ್ಲೆಯಲ್ಲಿ ಅತ್ಯಾಚಾರದಿಂದ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿರುವ ಕೊನೆಯ ಹುಡುಗಿ ನಾನೇ ಆಗಿರಬೇಕು. ನನ್ನ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗಿದೆ. ಘಟನೆ ನೆನಪಿಸಿಕೊಂಡರೆ ಮೈ ನಡಗುತ್ತದೆ. ನಾನು ಬಹಳ ವರ್ಷ ಈ ಭೂಮಿಯ ಮೇಲೆ ಇದ್ದು, ಇತರರಿಗೆ ಸಹಾಯ ಮಾಡಬೇಕೆಂದು ಬಯಸಿದ್ದೆ, ಆದರೆ ಈ ಘಟನೆ ಬಳಿಕ ನಾನಿದ್ದು ಪ್ರಯೋಜನ ಇಲ್ಲ ಎನ್ನಿಸುತ್ತಿದೆ, ಸಾಯುವುದೊಂದೇ ನನಗಿರುವ ದಾರಿ’ ಎಂದು ಬಾಲಕಿ ಬರೆದಿದ್ದಾಳೆ.
ಈಕೆಯ ಮೇಲೆ ಅತ್ಯಾಚಾರ ಎಸಗಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ವಾರ ಕೊಯಮತ್ತೂರು ಜಿಲ್ಲೆಯಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಲಾ ಶಿಕ್ಷಕರ ಲೈಂಗಿನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಇದೀಗ ಇನ್ನೊಂದು ಸಾವಿನ ಘಟನೆ ನಡೆದಿದೆ.