ಸುಮಲತಾ v/s ಎಚ್‌ಡಿಕೆ: ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಜಾಲತಾಣದಲ್ಲಿ ಟ್ರೋಲ್‌

sumalatha
Published on

ಮಂಡ್ಯ: ಕೆಆರ್‌ಎಸ್‌ ಡ್ಯಾಮ್‌ ಬಿರುಕು ವಿಚಾರವಾಗಿ ಸಂಸದೆ ಸುಮಲತಾ ಅಂಬರೀಷ್‌ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ಕಾವೇರುತ್ತಲೇ ಇದೆ.

ಈ ನಡುವೆಯೇ ಸುಮಲತಾ ಅವರು ಮಾತಿನ ಮಧ್ಯೆ ಅಂಬರೀಶ್ ಮುಂದೆ ‌ಯಾರೆಲ್ಲಾ ಕೈ ಕಟ್ಟಿ ನಿಲ್ತಿದ್ರು ಎಂದು ತಮಗೆ ಗೊತ್ತಿದೆ ಎಂದಿದ್ದರು. ಅಂಬರೀಶ್ ಎದುರು ಕೈಕಟ್ಟಿ ನಿಲ್ಲುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂದಿದ್ದರು.

ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಸುಮಲತಾ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದರು.

ಈ ಮಾತಿಗೆ ಪುಷ್ಟಿ ನೀಡಲು ಎಂಬಂತೆ ಸುಮಲತಾ  ಹಾಗೂ ಅಂಬರೀಶ್‌ ಅವರ ಬೆಂಬಲಿಗರು ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಅಂಬರೀಶ್‌ ಅವರ ಎದುರಿಗೆ ಕುಮಾರಸ್ವಾಮಿ ಅವರು ಕೈಕಟ್ಟಿ ನಿಂತುಕೊಂಡಿರುವ ಫೋಟೋ ಇದಾಗಿದೆ. ಸುಮಲತಾ ಬೆಂಬಲಿಸುವ ಪೇಜ್‌ಗಳಲ್ಲಿ ಈ ಫೋಟೋ ಹರಿದಾಡುತ್ತಿದೆ. ಈ ಫೋಟೋಗೆ ವಿಧವಿಧವಾದ ಕ್ಯಾಪ್ಷನ್ ಕೊಟ್ಟು ಶೇರ್‌ ಮಾಡುತ್ತಿದ್ದಾರೆ ಸುಮಲತಾ ಅಭಿಮಾನಿಗಳು.

ಹುಲಿಯ ಮುಂದೆ ಇಲಿಯಂತೆ ನಿಂತವರು ಯಾರು ಎಂದು ಕೆಲವರು ಪ್ರಶ್ನಿಸಿದ್ದರೆ, ಏನೋ ಇದು ಅಣ್ಣನ ಕೈಲಿ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರು ನಾಯಕರ ನಡುವಿನ ಸಮರ ಜಾಲತಾಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಟ್ರೆಂಡ್‌ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net