ಕಾಂಗ್ರೆಸ್‌ ಮುಖಂಡ ವೀರಭದ್ರ ಸಿಂಗ್‌ ಇನ್ನಿಲ್ಲ: 6 ಬಾರಿ ಸಿಎಂ, 5 ಬಾರಿ ಸಂಸದ, 9 ಬಾರಿ ಶಾಸಕರಾಗಿದ್ದ ಕೀರ್ತಿ ಇವರದ್ದು

singh
Published on

ಶಿಮ್ಲಾ: ಹಿರಿಯ ಕಾಂಗ್ರೆಸ್ ಮುಖಂಡ, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನರಾಗಿದ್ದಾರೆ. ಇವರಿಗೆ 87 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್‌ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಐಜಿಎಂಸಿ) ದಾಖಲಿಸಲಾಗಿತ್ತು. ಇಂದು ನಸುಕಿನ 3.40ರ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಏಪ್ರಿಲ್ 12 ಮತ್ತು ಜೂನ್ 11 ರಂದು ಎರಡು ತಿಂಗಳಲ್ಲಿ ಎರಡು ಬಾರಿ ವೀರಭದ್ರ ಸಿಂಗ್ ಕರೊನಾ ಸೋಂಕಿಗೆ ತುತ್ತಾಗಿದ್ದರು. ಏಪ್ರಿಲ್​ನಲ್ಲಿ ಅವರನ್ನು ಮೊಹಾಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್ 23 ರಂದು ಬಿಡುಗಡೆ ಮಾಡಲಾಯಿತು. ಆದರೆ ಶಿಮ್ಲಾಕ್ಕೆ ಆಗಮಿಸಿದಾಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿ ಮತ್ತೆ ಅವರನ್ನು ಐಜಿಎಂಸಿಗೆ ಸೇರಿಸಲಾಗಿತ್ತು. ಸಿಂಗ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ವೆಂಟಿಲೇಟರ್ ಸಹಾಯದಲ್ಲಿ ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಆರು ಅವಧಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಿಂಗ್‌ ಅವರು, ಒಂಬತ್ತು ಬಾರಿ ಶಾಸಕ ಮತ್ತು ಐದು ಬಾರಿ ಸಂಸತ್ತಿನ ಸದಸ್ಯರಾಗಿದ್ದರು. ಮಾರ್ಚ್ 1998 ರಿಂದ ಮಾರ್ಚ್ 2003 ರವರೆಗೆ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರ ಅವರ ಪತ್ನಿ ಪ್ರತಿಭಾ ಸಿಂಗ್ ಮತ್ತು ಮಗ ವಿಕ್ರಮಾದಿತ್ಯ ಸಿಂಗ್ ಕೂಡ ರಾಜಕಾರಣಿಗಳು. ಪ್ರತಿಭಾ ಸಿಂಗ್ ಮಾಜಿ ಸಂಸದರಾಗಿದ್ದರೆ, ವಿಕ್ರಮಾದಿತ್ಯ ಶಿಮ್ಲಾ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net