ಗಂಟೆಗಟ್ಟಲೆ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರಹಾವು- ಅಸಹಾಯಕನಾದ ಉರಗ ತಜ್ಞ!

snake
Published on

ವಾರ್ಧಾ (ಮಹಾರಾಷ್ಟ್ರ): ಸುಮಾರು ಎರಡು ಗಂಟೆ ಬಾಲಕಿಯ ಕೊರಳನ್ನು ಸುತ್ತಿಕೊಂಡ ನಾಗರಹಾವು ಕೊನೆಗೆ ಆಕೆಯನ್ನು ಕಚ್ಚಿ ಅಲ್ಲಿಂದ ಹೋದ ಭಯಾನಕ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ.

ಬಾಲಕಿ ಮಲಗಿದ್ದಾಗ ಹಾವು ಕುತ್ತಿಗೆಗೆ ಸುತ್ತಿಕೊಂಡಿದೆ. ಬಾಲಕಿಗೆ ಇದರ ಅರಿವು ಇರಲಿಲ್ಲ. ಹಾವನ್ನು ನೋಡಿದ ಕುಟುಂಬಸ್ಥರು ಗಾಬರಿಯಾದರೂ ಏನೂ ಮಾಡದ ಸ್ಥಿತಿ ಅವರದ್ದಾಗಿತ್ತು. ಕೊನೆಗೆ ಸುಮಾರು ಎರಡು ಗಂಟೆ ಅಲ್ಲಿಯೇ ಇದ್ದ ಹಾವು ಬಾಲಕಿಗೆ ಎಚ್ಚರವಾದ ಮೇಲೆ ಹಾವು ಕಚ್ಚಿ ಅಲ್ಲಿಂದ ಸರಸರ ಹರಿದು ಹೋಗಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇದು ನಡೆದದ್ದು ಮಧ್ಯರಾತ್ರಿ ಸುಮಾರು 12-1 ಗಂಟೆಯ ಆಸುಪಾಸಿನಲ್ಲಿ. ಏಳು ವರ್ಷದ ಬಾಲಕಿ ಮಲಗಿದ್ದಾಗ ಈ ಹಾವು ಬಂದಿದೆ. ಅದರ ಬುಸ್‌ ಬುಸ್‌ ಸದ್ದಿನಿಂದ ಆಕೆಯ ಪಾಲಕರಿಗೆ ಎಚ್ಚರವಾಗಿದೆ. ಎದ್ದು ನೋಡಿದಾಗ ಗಾಬರಿಬಿದ್ದಿದ್ದಾರೆ. ಅಷ್ಟರಲ್ಲಿಯೇ ಹಾವು ಹೆಡೆ ಎತ್ತಿ ನಿಂತಿದೆ. ಏನು ಮಾಡುವುದು ಎಂದು ತಿಳಿಯದ ಅವರು ಕೂಡಲೇ ಉರಗ ತಜ್ಞನಿಗೆ ಕರೆ ಮಾಡಿದ್ದಾರೆ. ಆದರೆ ಹೆಡೆ ಒಂದು ಬಿಟ್ಟು ಸಂಪೂರ್ಣ ಹಾವು ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಆ ಸಮಯದಲ್ಲಿ ಅದನ್ನು ಹಿಡಿಯುವುದು ತಜ್ಞನಿಗೂ ಕಷ್ಟವಾಯಿತು. ಸ್ವಲ್ಪ ಹತ್ತಿರ ಹೋದರೂ ಹಾವು ಬಾಲಕಿಗೆ ಕಚ್ಚುವ ಸಾಧ್ಯತೆ ಇತ್ತು. ಆದರೂ ತನ್ನ ಕೈಯಲ್ಲಾದದ್ದನ್ನು ಆತ ಮಾಡಿದರೂ ಹಾವನ್ನು ಹಿಡಿಯಲು ಆಗಲಿಲ್ಲ.

ಎಲ್ಲರೂ ಅಸಹಾಯಕರಾಗಿ ನೋಡುತ್ತಿದ್ದರು. ಕೂಡಲೇ ಬಾಲಕಿಗೆ ಎಚ್ಚರವಾಗಿಬಿಟ್ಟಿದೆ. ಆಕೆ ಅಲುಗಾಡುತ್ತಿದ್ದಂತೆಯೇ ಹಾವು ಆಕೆಯನ್ನು ಕಚ್ಚಿ ಅಲ್ಲಿಂದ ಸರಸರ ಹರಿದು ಹೋಗಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರ ಸ್ಥಳಕ್ಕೆ ಬಂದು ಅದರ ವಿಡಿಯೋ ಮಾಡಿದ್ದಾರೆ. ಅದರ ವಿಡಿಯೋ ವೈರಲ್‌ ಆಗಿದೆ.

ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಬೇರೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net