

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಸಂಭವಿಸಿದ ಮಹಾಸ್ಫೋಟದ ಬಗ್ಗೆ ಇನ್ನೂ ಆತಂಕ ಸೃಷ್ಟಿಯಾಗಿರುವ ನಡುವೆಯೇ ಶಿವಮೊಗ್ಗದಲ್ಲಿ ಮಧ್ಯರಾತ್ರಿ ಬೆಂಕಿ ಅನಾಹುತ ನಡೆದಿದೆ.
ಗಾಂಧಿಬಜಾರ್‌ನಲ್ಲಿ ಇರುವ ನಾವೆಲ್ಟೀಸ್ ಅಂಗಡಿಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿದು ಸುತ್ತಮುತ್ತಲ ಜನರು ನಡುರಾತ್ರಿಯೇ ಬೆಚ್ಚಿಬೀಳುವಂತಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿದೆ ಎನ್ನಲಾಗಿದೆ. ಇದು ಇಡೀ ಅಂಗಡಿಯನ್ನೇ ವ್ಯಾಪಿಸಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಈ ವೇಳೆಗಾಗಲೇ ಬೆಂಕಿ ವ್ಯಾಪಿಸಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.