ಅಕ್ಕ ಬೆಳಗಿನ ಯೋಗದ ಪೋಸ್‌, ಭಾವ ರಾತ್ರಿಯ... ಜಾಲತಾಣದಲ್ಲಿ ಶಮಿತಾ ಶೆಟ್ಟಿ ಟ್ರೋಲ್

shamitha
Published on

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅವರು ಬ್ಲೂಫಿಲ್ಮ್‌ ಕೇಸ್‌ನಲ್ಲಿ ಸಿಲುಕಿರುವ ನಡುವೆಯೇ ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮಾ 2 ಸಿನಿಮಾ ರಿಲೀಸ್​ ಆಗಿದೆ. ಪತಿಯ ಕೆಲಸದಿಂದಾಗಿ ಮುಜುಗರಕ್ಕೆ ಒಳಗಾಗಿರುವ ಶಿಲ್ಪಾ, ತಮ್ಮ ಪತಿಯ ಪರವಾಗಿ ಇದಾಗಲೇ ಹೇಳಿಕೆಗಳನ್ನು ನೀಡಿದ್ದು, ಅವರು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ ಇದರ ಮಧ್ಯೆಯೇ ರಿಲೀಸ್‌ ಆಗಿರುವ ಹಂಗಾಮಾ 2 ಚಿತ್ರಕ್ಕೆ ಶುಭಾಶಯಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿರುವಾಗಲೇ ಶಿಲ್ಪಾ ತಂಗಿ ‌ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ. 14 ವರ್ಷ ನಟನೆಯನ್ನು ನಿಲ್ಲಿಸಿದ್ದ ಶಿಲ್ಪಾ ಈ ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್‌ ಆಗಿದ್ದು, ಇದು ಇದೇ‌ 23ರಂದು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್’ ಓಟಿಟಿ ಮೂಲಕ ರಿಲೀಸ್​ ಆಗಿದೆ.

‘ಯೋಗ ಕಲಿಸಿದ ಪಾಠಗಳನ್ನು ನಾನು ನಂಬುತ್ತೇನೆ ಮತ್ತು ಪಾಲಿಸುತ್ತೇನೆ. ಬದುಕು ಇರುವುದೇ ಈ ಕ್ಷಣದಲ್ಲಿ. ಒಂದು ಒಳ್ಳೆಯ ಸಿನಿಮಾ ಮಾಡಲು ‘ಹಂಗಮಾ 2’ ತಂಡ ಶ್ರಮಿಸಿದೆ. ಎಂದಿಗೂ ಸಿನಿಮಾಗೆ ತೊಂದರೆ ಆಗಬಾರದು. ಹಾಗಾಗಿ, ಇಂದು ನೀವು ನಿಮ್ಮ ಕುಟುಂಬ ಸಮೇತ ಈ ಸಿನಿಮಾ ನೋಡಿ ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಶಿಲ್ಪಾ ಶೆಟ್ಟಿ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಮಿತಾ, ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿರುವುದು ನನಗೆ ಗೊತ್ತಿದೆ. ನಾನು ಸದಾ ನಿನ್ನ ಜತೆ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವೆ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್​ ಆಗುತ್ತಿ ಎಂದು ಗೊತ್ತಿರುವೆ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್​ ದಿ ಬೆಸ್ಟ್​ ಎಂದು ಹೇಳಿದ್ದಾರೆ.

ಆದರೆ ಶಮಿತಾ ಮಾಡಿರುವ ಟ್ವೀಟ್‌ ಸಕತ್‌ ಟ್ರೋಲ್‌ ಆಗಿದೆ. ಬಹಳಷ್ಟು ಮಂದಿ ಶಮಿತಾರ ಕಮೆಂಟ್‌ಗೆ ರಾಜ್‌ ಕುಂದ್ರಾ ಅವರನ್ನು ಎಳೆದುತಂದಿದ್ದಾರೆ. ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್‍ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಬಾವ ರಾತ್ರಿಯ ಯೋಗಪೋಸ್‍ಗಳನ್ನು ಕಲಿಸಿಕೊಡುತ್ತಾರೆ ಎಂದು ಕಮೆಂಟ್‌ ಮಾಡಿದ್ದು, ಇದೀಗ ಸಾಕಷ್ಟು ವೈರಲ್‌ ಆಗಿದೆ. ಈ ಕಮೆಂಟ್‌ ಸರಿಯಾಗಿದೆ ಎಂದು ನೂರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

ಇದಕ್ಕೆ ಕಾರಣವೂ ಇದೆ. ಅದೇನೆಂದರೆ ರಾಜ್‌ ಕುಂದ್ರಾ ಅವರು, ಶಮಿತಾ ಶೆಟ್ಟಿ ಜತೆಗೂ ಒಂದು ಸಿನಿಮಾ ಮಾಡಿ, ಅದನ್ನು ಆ್ಯಪ್‍ನಲ್ಲಿ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ನಟಿ ಗೆಹನಾ ವಸಿಷ್ಠ್ ಹೇಳಿದ್ದರು. ಆದ್ದರಿಂದ ಶಮಿತಾ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net