

ಗಾಂಧಿನಗರ (ಗುಜರಾತ್): ಪುರುಷರು ಪುರುಷನನ್ನು, ಮಹಿಳೆ ಮಹಿಳೆಯನ್ನೇ ಮದುವೆಯಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದ್ದು, ಆ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ, ಯುವಕನೂ ಬೇಡ, ಯುವತಿಯೂ ಬೇಡ ಎಂದ 24 ವರ್ಷದ ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಲಿದ್ದಾಳೆ. ಸಾಲದು ಎಂಬುದಕ್ಕೆ ಹನಿಮೂನ್‍ಗೆ ಕೂಡ ಹೋಗುವುದಾಗಿ ಹೇಳಿದ್ದಾಳೆ.
ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ ಈಗ ತನ್ನನ್ನು ತಾನು ಮದುವೆಯಾಗಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾಳೆ. ಜೂನ್ 11 ರಂದು ಈಕೆಯ ಮದುವೆ, ಅವಳ ಜತೆಯೇ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿ-ವಿಧಾನಗಳ ರೀತಿಯಲ್ಲಿ ಮದುವೆಯಾಗಲಿದ್ದೇನೆ. ನಂತರ ಗೋವಾಗೆ ಹನಿಮೂನ್‍ಗೆ ಹೋಗಲಿದ್ದೇನೆ ಎಂದಿದ್ದಾಳೆ.
ಈ ಬಗ್ಗೆ ಮಾಧ್ಯಮಗಳ ಜತೆಯೂ ಕ್ಷಮಾ ಮಾತನಾಡಿದ್ದಾಳೆ. ನನ್ನದು ಭಾರತದ ಮೊದಲ ಏಕವ್ಯಕ್ತಿ ವಿವಾಹ. ಈ ರೀತಿ ಇದುವರೆಗೆ ಯಾರೂ ಮದುವೆಯಾಗಲಿಲ್ಲ. ಮದುವೆಯಾಗಿರುವವರ ಹಲವಾರು ಘಟನೆಗಳನ್ನು ನೋಡಿದ್ದೇನೆ. ಅವೆಲ್ಲಾ ನೋಡಿದ ಮೇಲೆ ಮದುವೆಯಾಗದಿರುವುದೇ ಬೆಸ್ಟ್ ಎನ್ನಿಸಿತು. ಆದರೆ ವಧುವಿನ ರೂಪದಲ್ಲಿ ನನ್ನನ್ನು ನಾನೇ ನೋಡಿಕೊಳ್ಳುವ ಆಸೆ. ನನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದ್ದರಿಂದ ನನ್ನನ್ನು ನಾನೇ ಮದುವೆ ಯಾಕೆ ಆಗಬಾರದು ಎಂದು ಯೋಚಿಸಿ ಈ ತೀರ್ಮಾನ ತೆಗೆದುಕೊಂಡೆ ಅಂದಿದ್ದಾಳೆ.
ಜನರು ಪ್ರೀತಿ ಮಾಡುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ ಎಂದಿದ್ದಾಳೆ. ಮದುವೆಗೆ ಪಾಲಕರೂ ಒಪ್ಪಿಗೆ ಸೂಚಿಸಿ ಆಶೀರ್ವಾದ ಮಾಡಿದ್ದಾರೆ. ಗೋತ್ರಿಯ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. ನಂತರ ನಾನೊಬ್ಬಳೇ ಹನಿಮೂನ್‍ಗೆ ಗೋವಾಕ್ಕೆ ಹೋಗಲಿದ್ದೇನೆ ಎಂದಿದ್ದಾಳೆ.