ಪ್ರೇಮಿಗಾಗಿ ಜೀವದ ಹಂಗುತೊರೆದು ಗಂಟೆಗಟ್ಟಲೆ ನದಿಯಲ್ಲಿ ಈಜಿದಳು: ಆತನನ್ನೇ ಮದ್ವೆಯಾಗಿ ಅರೆಸ್ಟ್​ ಆದಳು!

bangla
Published on

ಕೋಲ್ಕತಾ: ಪ್ರೇಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ಪ್ರೇಯಸಿ ಜೀವದ ಹಂಗು ತೊರೆದು ನದಿಯನ್ನು ಒಂದು ಗಂಟೆ ಈಜಿ ಬಂದಿದ್ದಾಳೆ. ಆದರೆ ಅವಳ ಅದೃಷ್ಟ ಕೈಕೊಟ್ಟಿದ್ದರಿಂದ ಪ್ರೇಮಿ ಸಿಕ್ಕರೂ ಈಗ ಅರೆಸ್ಟ್​ ಆಗಿದ್ದಾಳೆ!

ಇದು ಬಾಂಗ್ಲಾದೇಶದ 22 ವರ್ಷದ ಕೃಷ್ಣಾ ಮಂಡಲ್​ ಸಾಹಸದ ಕಥೆ. ಕೃಷ್ಣಾ ಹಾಗೂ ಭಾರತದ (ಪಶ್ಚಿಮ ಬಂಗಾಳದ ಕೋಲ್ಕತಾ) ಆಶಿಖ್​ ಅವರ ಪ್ರೇಮ್​ ಕಹಾನಿ. ಕೃಷ್ಣಾ ಮತ್ತು ಆಶಿಖ್​ ಅವರ ಪ್ರೇಮಕಥೆ ಶುರುವಾದದ್ದು ಫೇಸ್​ಬುಕ್​ನಿಂದ. ಫೇಸ್​ಬುಕ್​ನಲ್ಲಿ ಆದ ಪರಿಚಯ, ಸಲುಗೆಗೆ ತಿರುಗಿ ಅದು ಪ್ರೇಮಕ್ಕೂ ತಿರುಗಿ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು.

ಆದರೆ ಕೃಷ್ಣಾ ಬಳಿ ಪಾಸ್‌ಪೋರ್ಟ್ ಇರಲಿಲ್ಲ, ಆದ್ದರಿಂದ ಅವರು ಭಾರತಕ್ಕೆ ಬಂದು ಆಶಿಖ್​ನನ್ನು ಮದುವೆಯಾಗುವಂತೆ ಇರಲಿಲ್ಲ. ಆದರೆ ಇವರಿಬ್ಬರೂ ದಂಪತಿಯಾಗಲು ನಿರ್ಧರಿಸಿಯಾಗಿತ್ತು. ಆಶಿಖ್​ ಧೈರ್ಯ ಮಾಡಲಿಲ್ಲ. ಕೃಷ್ಣಾ ಧೈರ್ಯಗೆಡಲಿಲ್ಲ. ಕೋಲ್ಕತಾಕ್ಕೆ ಬರಲು ಹುಚ್ಚು ಸಾಹಸಕ್ಕೆ ಕೈಹಾಕಿದಳು.

ಕೃಷ್ಣಾ ನದಿಯಲ್ಲಿ ಸುಮಾರು ಒಂದು ಗಂಟೆ ಈಜಿ ಭಾರತದ ಗಡಿ ತಲುಪಿದಳು. ಎಲ್ಲವೂ ಅಂದುಕೊಂಡಂತೆಯೇ ಆಯಿತು. ಕೋಲ್ಕತಾದ ದೇವಸ್ಥಾನದಲ್ಲಿ ಮದುವೆಯೂ ಆಯಿತು. ಆದರೆ ಈ ನೂತನ ದಂಪತಿ ಅದೃಷ್ಟ ಕೈಕೊಟ್ಟಿತ್ತು.

ಕೃಷ್ಣಾ ಬಾಂಗ್ಲಾದೇಶದಿಂದ ಬಂದ ಸುದ್ದಿ ಪೊಲೀಸರ ಕಿವಿ ತಲುಪಿತು. ಆಕೆಯನ್ನು ಹುಡುಕಿಕೊಂಡು ಹೋಗಿ ಬಂಧಿಸಿದ್ದಾರೆ. ಇದಕ್ಕೆ ಕಾರಣ ಭಾರತಕ್ಕೆ ಅಕ್ರಮ ಪ್ರವೇಶ. ಭಾರತಕ್ಕೆ ಬರಲು ಆಕೆಯ ಬಳಿ ಅಗತ್ಯ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಕಾನೂನಿನ ಅನ್ವಯ ಆಕೆಯನ್ನು ಬಂಧಿಸಲಾಗಿದೆ. ಬಾಂಗ್ಲಾದೇಶದ ಗಡಿಯಲ್ಲಿ ಅಧಿಕಾರಿಗಳ ಜತೆ ಮಾತನಾಡಿ ಅವಳನ್ನು ಪುನಃ ಬಾಂಗ್ಲಾದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.

ಇದರಿಂದ ದಂಪತಿ ಆಘಾತಗೊಂಡಿದ್ದು, ಕಾನೂನಿನ ನೆರವು ಪಡೆಯಲು ಚಿಂತನೆ ನಡೆಸುತ್ತಿದ್ದಾರೆ.

ಈ ಹಿಂದೆ ಕೂಡ ಯುವಕನೊಬ್ಬ ಇದೇ ಮಾದರಿಯಲ್ಲಿ ಚಾಕಲೇಟ್ ಖರೀದಿಸಲು ಭಾರತಕ್ಕೆ ಕಾಲಿಟ್ಟಿದ್ದ. ನಂತರ ನ್ಯಾಯಾಲಯ ಆತನಿಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net