ಫೆಬ್ರುವರಿಯಲ್ಲಿ ಶಾಲೆ ಓಪನ್‌ ಆಗತ್ತಾ? ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತಾ? ಸಚಿವ ನಾಗೇಶ್ ಹೇಳಿದ್ದೇನು ನೋಡಿ...

nagesh bc
Published on

ಬೆಂಗಳೂರು: ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸದ್ಯ ಆಫ್‌ಲೈನ್‌ ತರಗತಿಗಳನ್ನು ಕ್ಲೋಸ್ ಮಾಡಲಾಗಿದ್ದು, ಆನ್‌ಲೈನ್‌ ಶಾಲೆಗಳು ನಡೆಯುತ್ತಿವೆ. ಕರೊನಾ ಸೋಂಕಿತರ ಸಂಖ್ಯೆ ಶಾಲಾ-ಕಾಲೇಜುಗಳ ಮಕ್ಕಳನ್ನೂ ಬಾಧಿಸಲು ಶುರು ಮಾಡಿದ್ದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಶಾಲೆಯನ್ನು ಮತ್ತೆ ಮುಚ್ಚಲಾಗಿದೆ. ಫೆಬ್ರುವರಿಯಲ್ಲಿ ಶಾಲೆ ತೆರೆಯತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಹಲವು ಪಾಲಕರು ಇದ್ದಾರೆ. ಅದೇ ರೀತಿ ಇದಾಗಲೇ ನಿಗದಿಯಾಗಿರುವ ಎಸ್ಎಸ್‌ಎಸ್‌ಸಿ ಪರೀಕ್ಷೆಗೆ ಮತ್ತೆಲ್ಲಿ ಗ್ರಹಣ ಬಡಿಯಬಹುದೋ ಎಂಬ ಆತಂಕ ವಿದ್ಯಾರ್ಥಿಗಳದ್ದು.

ಇದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರಿಸಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿವೆ ಎಂದಿದ್ದಾರೆ. ಇದೇ ವೇಳೆ ಫೆಬ್ರುವರಿ ಮೊದಲನೆಯ ವಾರದಲ್ಲಿ ಶಾಲೆಗಳು ಓಪನ್‌ ಆಗಿಯೇ ಆಗುತ್ತದೆ ಎಂಬ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.

ಇದೇ 29ನೇ ತಾರೀಕಿನಂದ ಪುನಃ ಸಭೆ ಸೇರುತ್ತಿದ್ದೇವೆ. ಅಲ್ಲಿ ಶಾಲೆ ತೆರೆಯುವ ಕುರಿತು ಮತ್ತೊಮ್ಮೆ ಚರ್ಚೆ ನಡೆಸುತ್ತೇವೆ. ಆದರೆ ಕರೊನಾ ಸೋಂಕಿನ ಪ್ರಮಾಣ ಬೆಂಗಳೂರು ಸೇರಿದಂತೆ ಹಲವೆಡೆ ಕಡಿಮೆಯಾಗುತ್ತಾ ಬಂದಿವೆ. ಆದ್ದರಿಂದ ಫೆಬ್ರುವರಿ ಮೊದಲನೆಯ ವಾರದಲ್ಲಿ ಶಾಲೆಗಳನ್ನು ತೆರೆಯುವ ಎಲ್ಲಾ ಸಾಧ್ಯತೆಗಳೂ ಇವೆ ಎಂದಿದ್ದಾರೆ.

ಕರೊನಾ ಸೋಂಕಿನ ಪ್ರಮಾಣ ಕಡಿಮೆ ಆಗಲಿ ಅಥವಾ ಜಾಸ್ತಿ ಆಗಲಿ ಫೆಬ್ರವರಿ ಆರಂಭದಿಂದಲೇ ಬೆಂಗಳೂರಿನಲ್ಲಿ ಶಾಲೆ ಆರಂಭವಾಗುತ್ತವೆ. ಇದಾಗಲೇ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 29ರಂದು ಈ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ ಎಂದಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡಿನಲ್ಲಿ ಅವರು ಈ ಕುರಿತು ಮಾತನಾಡಿದರು. ತಜ್ಞರು ಮೂರನೇ ಅಲೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಒಟ್ಟು 77 ಸಾವಿರ ಶಾಲೆಯನ್ನು ಪ್ರಾರಂಭಿಸಿದ್ದೇವೆ. ಐದು ಜಿಲ್ಲೆಗಳಲ್ಲಿ ಶಾಲೆಗಳನ್ನೇ ಬಂದ್ ಮಾಡಿಲ್ಲ. 19 ಜಿಲ್ಲೆಗಳಲ್ಲಿ 246 ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಅದು ಕೂಡ 3ರಿಂದ 7 ದಿನ ಬಂದ್ ಮಾಡಿದ್ದೆವು. ಪೂರ್ಣವಾಗಿ ಬಂದ್ ಮಾಡಿದ್ದು ಅಂದರೆ ದೊಡ್ಡ ನಗರಗಳಲ್ಲಿ ಧಾರವಾಡ, ಹುಬ್ಬಳ್ಳಿ, ಮೈಸೂರು, ಮಂಡ್ಯ, ಹಾಗೂ ಬೆಂಗಳೂರಿನ ಮಹಾನಗರಗಳಲ್ಲಿ ಮಾತ್ರ ಎಂದು ಹೇಳಿದರು.

ಮಾರ್ಚ್‌ 28ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂದು ನಡೆಯುತ್ತದೆ. ಪರೀಕ್ಷೆ ಮುಂದೂಡಲಾಗುತ್ತದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು. ಕೋವಿಡ್ ನಿಯಮ ಪಾಲಿಸಿ ಪರೀಕ್ಷೆಗಳು ನಡೆಯಲಿವೆ. ಕೋವಿಡ್ ಬಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ನಾಗೇಶ್‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net