

ಬಾಗಲಕೋಟೆ: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರು ಕಳೆದೆರಡು ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿದ್ದು, ಅಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬೆಂಗಳೂರಿಗೆ ವಾಪಸಾಗಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಅಡಿಗಲ್ಲು, ಉದ್ಘಾಟನೆ ಸಮಾರಂಭ ಅವರು ಮಂಗಳವಾರ ನೆರವೇರಿಸಿದ್ದಾರೆ. ಬಾದಾಮಿ ತಾಲೂಕಿನಲ್ಲಿಯೇ ಹಲವಾರು ಸಮಾರಂಭದಲ್ಲಿ ಅವರು ಭಾಗಿಯಾಗಿ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ.
ಮುತ್ತಲಗೇರಿ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಭೂಮಿ ಪೂಜೆ, ಚೊಳಚಗುಡ್ಡ ಗ್ರಾಮದ ಕಾಲೇಜು ಕಟ್ಟಡದ ಭೂಮಿ ಪೂಜೆ, ಕಾತರಕಿ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ, ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ, ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಗ್ರಾಪಂ ಕಟ್ಟಡ ಉದ್ಘಾಟನೆ, ಕೆರೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಹಳಗೇರಿ ಗ್ರಾಮದ ಶಾಲಾ ಕಟ್ಟಡ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರಿಗೆ ಹೂವಿನ ಸ್ವಾಗತವೂ ಸಿಕ್ಕಿದೆ.
ಇದೇ ಸಂದರ್ಭದಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರ ಎದುರಿಗೆ ಊಟದ ತಟ್ಟೆ ಇಡಲಾಗಿತ್ತು. ಈ ಸಮಯದಲ್ಲಿ ಸಿದ್ದರಾಮಯ್ಯನವರು ಮಾಸ್ಕ್ ಧರಿಸಿದ್ದರು. ಆದರೆ ಊಟ ಮಾಡುವ ತರಾತುರಿಯಲ್ಲಿ ತಟ್ಟೆಯಿಂದ ನೇರವಾಗಿ ಒಂದು ತುತ್ತನ್ನು ಬಾಯಲ್ಲಿ ಇಟ್ಟರು. ಆಮೇಲೆ ಅವರಿಗೆ ತಾವು ಮಾಸ್ಕ್ ಧರಿಸಿರುವುದು ಅರಿವಾಗಿ ಅದನ್ನು ಬಿಚ್ಚಿಟ್ಟು ಊಟ ಮಾಡಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.