

ನವದೆಹಲಿ: ಬಾಲಿವುಡ್ನ ಮೋಸ್ಟ್ ವಾಂಟೆಡ್ ಬ್ಯಾಚುಲರ್ಗಳಲ್ಲಿ ಒಬ್ಬರು ಸಲ್ಮಾನ್ ಖಾನ್. ವರ್ಷ 55 ಆದರೂ ಮದುವೆಯಾಗದೇ ಹಲವಾರು ಮಹಿಳಾ ಅಭಿಮಾನಿಗಳ ನಿದ್ದೆಗೆಡಿಸಿರುವ ಸಲ್ಮಾನ್, ಇದೀಗ ತಮ್ಮ ಸುದೀರ್ಘ ಸಂಬಂಧದ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಹಿಂದಿನ ಬಿಗ್ ಬಾಸ್ 15 ಅಕ್ಟೋಬರ್ 2 ರಿಂದ ಆರಂಭವಾಗಲಿದೆ. ಈ ಸಲದ ಥೀಮ್ ’ಜಂಗಲ್’. ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಶಿಬಿರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಆರತಿ ಸಿಂಗ್ ಮತ್ತು ದೇಬೋಲೀನಾ ಭಟ್ಟಾಚಾಯರ್ಜಿ ಉಪಸ್ಥಿತಿಯಲ್ಲಿ ಷೋಗೆ ಚಾಲನೆ ನೀಡಲಾಗಿದ್ದು, ಇದರ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಸಲ್ಮಾನ್ ಖಾನ್, ತಮ್ಮ ಬಿಗ್ ಕ್ರಷ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸಲ್ಮಾನ್ ಖಾನ್ ಹೋದಲ್ಲೆಲ್ಲಾ ಅವರ ಸಂಬಂಧ ಹಾಗೂ ಮದುವೆ ಬಗ್ಗೆ ವಿಷಯಗಳ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಅದರ ಬಗ್ಗೆ ಕೇಳಿದ ಪ್ರಶ್ನೆಗೆ ಜೋರಾಗಿ ನಗುತ್ತಲೇ ಉತ್ತರಿಸಿದ ನಟ, ತನ್ನ ಜೀವನದಲ್ಲಿ ಯಾರ ಜತೆಗಾದರೂ ನಾನು ಸುದೀರ್ಘ ಸಂಬಂಧ ಹೊಂದಿದ್ದರೆ ಅದು ಬಿಗ್ ಬಾಸ್ ಷೋ ಮಾತ್ರ. ಉಳಿದವರ ಜತೆಗಿನ ಸಂಬಂಧವೆಲ್ಲವೂ.... ಎನ್ನುತ್ತ ಮಾತನ್ನು ಅರ್ಧಕ್ಕೆ ಕಟ್ ಮಾಡಿ ಮತ್ತೆ ಜೋರಾಗಿ ನಕ್ಕಿದ್ದಾರೆ.
ಇವರು ಯಾರದ್ದೋ ಜತೆಗಿನ ಸಂಬಂಧದ ಬಗ್ಗೆ ಹೇಳುತ್ತಾರೆ ಎಂದು ಕಾದು ಕುಳಿತಿದ್ದ ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಹೀಗೆ ಹೇಳುವ ಮೂಲಕ ಸಲ್ಮಾನ್ ನಿರಾಸೆ ಮೂಡಿಸಿದ್ದಾರೆ.
ಬಿಗ್ಬಾಸ್ ಜತೆಗಿನ ತಮ್ಮ ಸಂಬಂಧ ಹಾಗೂ ಸಾಮ್ಯತೆ ಕುರಿತು ಮಾತನಾಡಿದ ಅವರು, ನೋಡಿ, ನನಗೂ ಮದುವೆಯಾಗಿಲ್ಲ, 'ಬಿಗ್ ಬಾಸ್ಗೂ ಆಗಿಲ್ಲ. ಹಾಗಾಗಿ, ನಾವಿಬ್ಬರೂ ಯಾವುದೇ ಭಯವಿಲ್ಲದೆ, ನಮ್ಮನ್ನು ಬಾಸ್ ಎಂದು ಪರಿಗಣಿಸಬಹುದು, ಈ ಅವಿವಾಹಿತನ ಜತೆಗೇ ನಾನು ಸುದೀರ್ಘ ಸಂಬಂಧ ಹೊಂದಿದ್ದು ಎಂದು ನಕ್ಕಿದ್ದಾರೆ. ಬಿಗ್ಬಾಸ್ ಷೀ ನನಗೆ ಬಹಳ ಇಷ್ಟ. ಇದು ನನ್ನ ತಾಳ್ಮೆ ಮಟ್ಟವನ್ನು ಪರೀಕ್ಷಿಸುತ್ತದೆ. ಪ್ರತಿ ಬಾರಿ ನಾನು ಅತಿಯಾಗಿ ಕೋಪಗೊಂಡಾಗ, ತಾಳ್ಮೆ ಕಳೆದುಕೊಳ್ಳಬಾರದಿತ್ತು ಎಂದು ಅನಿಸುತ್ತದೆ ಮತ್ತು ನಂತರ ಕೋಪವನ್ನು ನಿಯಂತ್ರಿಸಲು ಹೆಚ್ಚು ಪ್ರಯತ್ನಿಸುತ್ತೇನೆ ಎಂದಿದ್ದಾರೆ.