ಮಾಜಿ ಶಾಸಕ ರೋಷನ್​ ಬೇಗ್​ ಸಿಬಿಐ ಕಸ್ಟಡಿಗೆ- ಕೋರ್ಟ್​ ಆದೇಶ

Roshan Baig
Published on

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಕೋರ್ಟ್‌ 3 ದಿನ ಸಿಬಿಐ ಕಸ್ಟಡಿಗೆ ನೀಡಿದೆ.

ಇದೇ ಸೋಮವಾರ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ವಿಚಾರಣೆ ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದ ನಂತರ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಪರಪ್ಪನ ಅಗ್ರಹಾರ ಸೇರಿದ್ದ ಬೇಗ್‌ರನ್ನು ಈ ಪ್ರಕರಣದಲ್ಲಿ ವಿಚಾರಣೆ ನಡೆಸಬೇಕು ಎಂದು ಇಂದು ಸಿಬಿಐ ಕೋರ್ಟ್‌ಗೆ ಮನವಿ ಮಾಡಿತ್ತು. ವಾದವನ್ನು ಪುರಸ್ಕರಿಸಿದ ಕೋರ್ಟ್‌ ಮೂರು ದಿನ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.

ಏನಿದು ಕೇಸ್​: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಥಳಕು ಹಾಕಿಕೊಂಡಿತ್ತು.

ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್​ ಬಂಧನಕ್ಕೂ ಮೊದಲೇ ವಿಡಿಯೋ ಹರಿ ಬಿಟ್ಟು, ರೋಷನ್ ಬೇಗ್ ಹಣ ಪಡೆದಿದ್ದಾರೆಂದು ಆರೋಪಿಸಿದ್ದರು. ಈ ಕುರಿತು ಎಸ್​ಐಟಿ ಸಹ ರೋಷನ್ ಬೇಗ್ ವಿಚಾರಣೆ ನಡೆಸಿತ್ತು.

ಬಳಿಕ ಇದೇ ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬೆನ್ನಲ್ಲೆ ರೋಷನ್ ಬೇಗ್ ವಿಚಾರಣೆ ಮುಂದುವರೆಸಿತ್ತು. ಮನ್ಸೂರ್ ಮಾಡಿದ ಆರೋಪಕ್ಕೆ ಪುಷ್ಟಿ ನೀಡುವಂಥ ಆಧಾರಗಳು ಸಿಕ್ಕ ಬೆನ್ನಲ್ಲೆ ಸಿಬಿಐ ಬೇಗ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್‌ ನೀಡಿ ರೋಷನ್‌ ಬೇಗ್‌ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ.

ಈ ನಡುವೆ ಮನ್ಸೂರ್‌ ಖಾನ್‌ ನಾನು ರೋಷನ್‌ ಬೇಗ್‌ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್‌ ಬೇಗ್‌ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್‌ ಖಾನ್‌ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net