VIDEO: ರಿಯಲ್​ ಲೈಫ್​ ಬಾಹುಬಲಿ! ಮಗುವನ್ನು ತಲೆಯ ಮೇಲಿನ ಪಾತ್ರೆಯಲ್ಲಿಟ್ಟು ಪ್ರವಾಹ ದಾಟಿದ ದೊಡ್ಡಪ್ಪ

1300405
Published on

ಪೆದ್ದಪಲ್ಲಿ (ತೆಲಂಗಾಣ): ಕೆಲವೊಮ್ಮೆ ನಿಜ ಜೀವನದಲ್ಲಿ ನಡೆಯುವ ಘಟನೆಗಳು ಯಾವ ಸಿನಿಮಾಗಳಿಗೂ ಕಡಿಮೆ ಏನಿರುವುದಿಲ್ಲ. ಅಂಥದ್ದೇ ಒಂದು ಘಟನೆ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದಿದೆ. ಬ್ಲಾಕ್​ಬಸ್ಟರ್​ ಬಾಹುಬಲಿ ಸಿನಿಮಾದ ದೃಶ್ಯವೊಂದನ್ನು ನೆನಪಿಸುವ ಘಟನೆ ಪೆದ್ದಪಲ್ಲಿಯಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳಿಂದ ತೆಲಂಗಾಣ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಓಡಾಡುವುದಕ್ಕೆ ಪರದಾಡುವಂತಾಗಿದೆ. ಪೆದ್ದಪಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸುರಯಪಲ್ಲಿ, ಪೋತಾರಂ, ಸಿರಿಪುರಂ, ಬೆಸ್ತಪಲ್ಲಿ, ವಿಲೋಚವರಂ, ಮರಿವಾಡ ಗ್ರಾಮಗಳು ಜಲಾವೃತಗೊಂಡಿವೆ. ಇಂಥ ಗ್ರಾಮವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ.

ಇಂಥ ಭೀಕರ ಪರಿಸ್ಥಿತಿಯ ನಡುವೆ ಮರಿವಾಡ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿಯೇ ಎರಡು ತಿಂಗಳ ಮಗುವೊಂದರನ್ನು ದೊಡ್ಡಪ್ಪ ಪಾತ್ರೆಯಲ್ಲಿ ಇಟ್ಟುಕೊಂಡು ರಕ್ಷಣೆ ಮಾಡಿದ್ದು, ಈ ಘಟನೆ ಬಾಹುಬಲಿ ಚಿತ್ರವನ್ನು ನೆನಪಿಸುವಂತಿದೆ.

ಸುಮಲತಾ ಎಂಬುವವರು ಕುಟುಂಬ ಪ್ರವಾಹಕ್ಕೆ ಸಿಲುಕಿತ್ತು. ನೀರನ್ನು ದಾಟಿ ಇನ್ನೊಂದು ಕಡೆ ಅವರು ಸೇರಬೇಕಿತ್ತು. ಸುಮಲತಾ ಅವರಿಗೆ ಎರಡು ತಿಂಗಳ ಮಗುವನ್ನು ಹೊತ್ತುಕೊಂಡು ಈ ಪ್ರವಾಹದ ನೀರನ್ನು ದಾಟುವುದು ಅಸಾಧ್ಯವೇ ಆಗಿತ್ತು. ಕುತ್ತಿಗೆಯ ವರೆಗೆ ಬರುತ್ತಿರುವ ನೀರನ್ನು ದಾಟಿ ಹೋಗುವುದು ಎಂದರೆ ದುಸ್ಸಾಹಸದ ಮಾತೇ ಆಗಿತ್ತು. ಆಗ ಅವರ ಪತಿಯ ಅಣ್ಣ ಅಂದರೆ ಮಗುವಿನ ದೊಡ್ಡಪ್ಪ ರಾಮಮೂರ್ತಿ ಮಾಡಿರುವ ಕೆಲಸ ಈಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಹಾಸಿಗೆಯಲ್ಲಿ ಮಗುವನ್ನು ಸುತ್ತಿ, ಅದನ್ನು ಪಾತ್ರೆಯಲ್ಲಿ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಸುರಕ್ಷಿತ ಪ್ರವಾಹದ ನೀರನ್ನು ದಾಟಿದ್ದಾರೆ. ಈ ಅಪರೂಪದ, ಸಾಹಸಮಯ ದೃಶ್ಯವನ್ನು ಅಲ್ಲಿಯೇ ಇರುವವರು ವಿಡಿಯೋ ಮಾಡಿದ್ದಾರೆ. ಇದು ಜಾಲತಾಣದಲ್ಲಿ ವೈರಲ್​ ಆಗಿದ್ದು, ಪ್ರಶಂಸೆಗಳ ಸುರಿಮಳೆ ಬಂದಿದೆ. ಈ ಸನ್ನಿವೇಶವನ್ನು ಹೆಚ್ಚಿನವರು ಬಾಹುಬಲಿ ಚಿತ್ರಕ್ಕೆ ಹೋಲಿಸಿದ್ದಾರೆ. ಇನ್ನು ಕೆಲವರು ಇದು ಮಹಾಭಾರತದಲ್ಲಿ ಕೃಷ್ಣನನ್ನು ವಸುದೇವ ತಲೆ ಮೇಲೆ ಹೊತ್ತು ಯಮುನೆಯನ್ನು ದಾಟಿದ ದೃಶ್ಯದಂತಿದೆ ಎಂದೂ ನೆನಪಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net