

ಬೆಂಗಳೂರು: ಕರೊನಾ ವೈರಸ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ದೇಶದ ಬಹುತೇಕ ಜನರಂತೆ ನಾಳಿನ ಐತಿಹಾಸಿಕ ಕ್ಷಣಕ್ಕಾಗಿ ಹಾತೊರೆಯುವಂತೆ ಕಾಣುತ್ತಿದೆ.
ರಾಮಮಂದಿರದ ಭೂಮಿಪೂಜೆಗೆ ಸಾಕ್ಷಿಯಾಗಲಿರುವ ನಾಳಿನ ದಿನದ ಶ್ರೇಯಸ್ಸಿಗಾಗಿ ಆಸ್ಪತ್ರೆಯಿಂದಲೇ ಪ್ರಾರ್ಥನೆ ಸಲ್ಲಿಸುತ್ತಿರುವ ಮುಖ್ಯಮಂತ್ರಿಗಳು ಈ ಕುರಿತು ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಮೂಲಕ ಕರ್ನಾಟಕದ ಜನತೆಯಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಅದೇನೆಂದರೆ, ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವ ಸಲುವಾಗಿ ಹಾಗೂ ದೇಶದ ಎಲ್ಲಾ ಜನರೂ ಈ ಪೂಜೆಯಲ್ಲಿ ಶಾರೀರಿಕವಾಗಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿಯೇ ಇಷ್ಟದೇವರಿಗೆ ಪೂಜೆ ಸಲ್ಲಿಸಿ ಎಂದು ಅವರು ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ದೇಗುಲಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಮತ್ತು ಪ್ರತಿ ಮನೆಗಳಲ್ಲಿ ಇಷ್ಟದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಬೇಕೆಂದು ಪ್ರಾರ್ಥಿಸಲು ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತೇನೆ. ಎಲ್ಲರಿಗೂ ಪ್ರಭು ಶ್ರೀರಾಮಚಂದ್ರ ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.