ಸಿಎಂ ಮನೆಗೆ ಕ್ವಾರಂಟೈನ್‌ ಸ್ಟಿಕರ್‌- 16ರವರೆಗೆ ಪ್ರವೇಶವಿಲ್ಲ!

yediyurappa
Published on

ಬೆಂಗಳೂರು: ಕರೊನಾ ವೈರಸ್‌ ಹಿನ್ನೆಲೆಯಲ್ಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದಲೇ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಆದರೆ ಆರೋಗ್ಯ ಇಲಾಖೆಯ ನಿಯಮದ ಹಿನ್ನೆಲೆಯಲ್ಲಿ, ಇಲಾಖೆಯ ಸಿಬ್ಬಂದಿ ಅವರ ಮನೆಗೆ ಹೋಂಕ್ವಾರಂಟೈನ್‌ ಸ್ಟಿಕರ್‌ ಅಂಟಿಸಿ ಹೋಗಿದ್ದಾರೆ.

ಸದ್ಯ ಹೊರಗಿನವರು ಯಾರೂ ಮನೆಗೆ ಪ್ರವೇಶಿಸಬಾರದು ಎಂದು ಈ ಸ್ಟಿಕರ್‌ನಲ್ಲಿ ಉಲ್ಲೇಖಿಸಲಾಗಿದೆ. ಬರುವ 16ನೇ ತಾರೀಖಿನವರೆಗೆ ಈ ಸ್ಟಿಕರ್‌ ಅನ್ವಯ ಆಗಲಿದೆ.

ಸದ್ಯ. ಯಡಿಯೂರಪ್ಪನವರು ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಭೇಟಿಯಾದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವ ಕಾರ್ಯವನ್ನು ಅಧಿಕಾರಿಗಳು ನೀಡುತ್ತಿದ್ದಾರೆ, ಜತೆಗೆ ಕಾವೇರಿ ನಿವಾಸಕ್ಕೂ ಯಾರನ್ನೂ ಭೇಟಿ ನೀಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ.

ಈ ನಡುವೆಯೇ, .ಯಡಿಯೂರಪ್ಪನವರು ಆಸ್ಪತ್ರೆಯಲ್ಲಿ ಇದ್ದುಕೊಂಡೇ ಎಲ್ಲಾ ಕಚೇರಿಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸರ್ಕಾರಿ ಕೆಲಸಗಳಿಗೆ ಅಡ್ಡಿಯಾದಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಅವರೇ ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.

ಜತೆಗೆ, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಅವರ ಆತ್ಮಚರಿತ್ರೆ ಪುಸ್ತಕಗಳನ್ನು ಸೇರಿದಂತೆ ತಮ್ಮೊಂದಿಗೆ 10 ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದು, ಅಲ್ಲಿ ಬಿಡುವಿನ ವೇಳೆಯಲ್ಲಿ ಓದುತ್ತಿದ್ದಾರೆ.

ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯ್ ಭಾಸ್ಕರ್ ಅವರು ಮಾತನಾಡಿ, ಆಸ್ಪತ್ರೆಯಿಂದಲೇ ಮುಖ್ಯಮಂತ್ರಿಗಳು ಕರ್ತವ್ಯನಿರ್ವಹಿಸುತ್ತಿದ್ದಾರೆ. ಫೋನ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಿದ್ದಾರೆ. ಆಸ್ಪತ್ರೆಯ ಕೊಠಡಿಯಲ್ಲಿಯೇ ವಿಡಿಯೋ ಕಾನ್ಪರೆನ್ಸ್ ಲಿಂಕ್ ಸ್ಥಾಪಿಸುವ ಸಾಧ್ಯತೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವ್ಯವಸ್ಥೆ ಕಲ್ಪಿಸಲು ಕೊಠಡಿಗೆ ಬರುವ ವ್ಯಕ್ತಿ ಪಿಪಿಇ ಸೂಟ್ ಧರಿಸಿ ವಾರ್ಡ್ ಒಳಗೆ ಇರಬೇಕಾದ ಅವಶ್ಯಕತೆ ಇದೆ. ಈ ಎಲ್ಲಾ ಆಯಾಮಗಳ ಕುರಿತಂತೆ ಚಿಂತನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net