

ಬಾರ್ಮರ್ (ರಾಜಸ್ಥಾನ): ಇದು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ಹೋದ 19 ವರ್ಷದ ಪ್ರೇಮಿಯೊಬ್ಬನ ಕಥೆ. ರಾಜಸ್ಥಾನದ ಬಾರ್ಮರ್ ಗ್ರಾಮದ ಈ ಯುವಕನ ಕುಟುಂಬವೀಗ ತಮ್ಮ ಮಗನನ್ನು ನೋಡಲು ಅಧಿಕಾರಿಗಳ ಕೈಕಾಲು ಹಿಡಿಯುತ್ತಿರುವ ಮನಕಲಕುವ ಲವ್‌ಸ್ಟೋರಿ ಇದಾಗಿದೆ.
19 ವರ್ಷದ ರಾಮ್ ಮೇಘಾವಲ್ ಎಂಬ ಯುವಕ ತನ್ನ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರೂ ಗುಟ್ಟಾಗಿ ಮನೆಯವರಿಗೆ ತಿಳಿಯದಂತೆ ಸಂಧಿಸುತ್ತಿದ್ದರು. ಆಗಾಗ್ಗೆ ಈ ಯುವಕ, ಯುವತಿಯ ಮನೆಗೆ ಕದ್ದುಮುಚ್ಚಿ ಹೋಗಿ ಬರುತ್ತಿದ್ದ. ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ಈ ಯುವಕನನ್ನು ಅವಳು ಕರೆಸಿಕೊಳ್ಳುತ್ತಿದ್ದಳು.
ಸ್ವಲ್ಪ ತಿಂಗಳು ಈ ಕಣ್ಣುಮುಚ್ಚಾಲೆ ನಿರಾತಂಕವಾಗಿ ಸಾಗಿತ್ತು. ಅದರೆ ಈ ಪ್ರೇಮಿಗಳ ಅದೃಷ್ಟ ಕೆಟ್ಟಿತ್ತು. ಎರಡು ತಿಂಗಳ ಹಿಂದೆ ರಾಮ್ ಮೇಘಾವಲ್ ಪ್ರಿಯತಮೆಯ ಮನೆಗೆ ಹೋದಾಗ ಆಕೆಯ ಪಾಲಕರು ಮನೆಗೆ ಬಂದುಬಿಟ್ಟಿದ್ದಾರೆ. ತಮ್ಮ ಮನೆಯಲ್ಲಿ ಮಗಳ ಜತೆ ಇರುವ ಈ ಯುವಕನನ್ನು ನೋಡಿ ಅವರು ಕಂಗಾಲಾಗಿ ಹೋಗಿದ್ದಾರೆ.
ಅವರನ್ನು ನೋಡಿದ ಯುವಕ ಅಲ್ಲಿಂದ ಹೇಗೇಗೋ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಆತನಿಗೆ ಮುಂದೆ ಏನೆಲ್ಲಾ ಅವಘಡಗಳು ಸಂಭವಿಸಬಹುದು ಎಂಬ ಚಿಂತೆ ಕಾಡತೊಡಗಿತು. ಪ್ರೇಯಸಿಯ ಪಾಲಕರು ಹೋಗಿ ತಮ್ಮ ಪಾಲಕರಿಗೆ ಹೇಳಿದರೆ ಗತಿಯೇನು? ಈ ಸುದ್ದಿ ಇಡೀ ಗ್ರಾಮಕ್ಕೆ ಹಬ್ಬಿದರೆ ತನ್ನ ಸ್ಥಿತಿ ಏನಾಗಬಹುದು... ಹೀಗೆಲ್ಲಾ ಯೋಚಿಸಿ ದಂಗಾಗಿ ಹೋದ ರಾಮ್ ಒಂದೇ ಸಮನೆ ಅಲ್ಲಿಂದ ಓಡಿಹೋಗಿದ್ದಾನೆ.
ತಪ್ಪಿಸಿಕೊಳ್ಳುವ ಭರದಲ್ಲಿ ಕತ್ತಲಲ್ಲಿ ಎಲ್ಲೆಲ್ಲೋ ಓಡಿಹೋದ ಈತ ತಿಳಿಯದೇ ಪಾಕಿಸ್ತಾನದ ಗಡಿ ದಾಟಿಬಿಟ್ಟಿದ್ದಾನೆ! ಪಾಕಿಸ್ತಾನಕ್ಕೆ ಅಕ್ರಮ ಪ್ರವೇಶ ಮಾಡಿದ್ದಾನೆ.
ಎರಡು ತಿಂಗಳಿನಿಂದ ತಮ್ಮ ಮಗ ಕಾಣೆಯಾಗಿದ್ದ ಬಗ್ಗೆ ಚಿಂತಿರರಾಗಿ ದೂರು ದಾಖಲು ಮಾಡಿದ್ದ ಪಾಲಕರಿಗೆ ಇದೀಗ ವಿಷಯ ತಿಳಿದುಬಂದಿದೆ. ತಮ್ಮ ಮಗ ಬದುಕಿರುವ ಸಂತಸ ಒಂದೆಡೆಯಾದರೆ, ಪಾಕಿಸ್ತಾನದಲ್ಲಿ ಆತನನ್ನು ಏನು ಮಾಡಿಬಿಟ್ಟಾರೋ ಎಂಬ ಭಯ ಇನ್ನೊಂದೆಡೆ. ಇದೀಗ ತಮ್ಮ ಮಗನನ್ನು ವಾಪಸ್ ಮನೆಗೆ ಕರೆಸಲು ವ್ಯವಸ್ಥೆ ಮಾಡುವಂತೆ ಕೋರಿ ಅಧಿಕಾರಿಗಳ ಮೊರೆ ಹೋಗಿದ್ದಾರೆ ಈತನ ಪಾಲಕರು.